ಡಿ.28ರಂದು ಕೋಟತಟ್ಟು ಗ್ರಾಪಂನಿಂದ ‘ಹೊಳಪು-2019’

Update: 2019-12-11 16:08 GMT

ಉಡುಪಿ, ಡಿ.11: ಪ್ರತಿ ವರ್ಷ ಕೋಟತಟ್ಟು ಗ್ರಾಪಂ ಹಾಗೂ ಡಾ. ಶಿವರಾಮ ಕಾರಂತ ಪ್ರತಿಷ್ಠಾನವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನಗರಾಡಳಿತ ಮತ್ತು ಸ್ಥಳಿಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಉತ್ಸವ ವನ್ನು ಹಮ್ಮಿಕೊಳ್ಳುತ್ತಿದೆ.

2016ರಿಂದ ‘ಹೊಳಪು’ ಹೆಸರಿನಡಿ ಪ್ರಾರಂಭಗೊಂಡ ಈ ಕ್ರೀಡಾಕೂಟವು ಮೂರು ವರ್ಷಗಳನ್ನು ಮುಗಿಸಿ ನಾಲ್ಕನೇ ವರ್ಷದ ‘ಹೊಳಪು-2019 ನೆನಪು ಗಳ ದಿಬ್ಬಣ’ದೊಂದಿಗೆ ಈ ಬಾರಿ ಡಿ.28ರಂದು ಕೋಟ ವಿವೇಕ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದರಲ್ಲಿ ಅವಿಭಜಿತ ದ.ಕ.ಜಿಲ್ಲೆಗೆ ಸೇರಿದ ಸುಮಾರು 388 ಗ್ರಾಪಂ, 2 ಜಿಪಂ, 8 ತಾಪಂ, 2ನಗರಸಬೆಗಳು, 15 ಪಟ್ಟಣ ಪಂಚಾಯತ್ ಮತ್ತು ಪುರಸಭೆಗಳು ಸೇರಿದಂತೆ ಸುಮಾರು 7000ಕ್ಕೂ ಮಿಕ್ಕಿ ಜನಪ್ರತಿನಿಧಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಕ್ರೀಡಾಕೂಟದ ನಿಮಿತ್ತ ಕುಂದಾಪುರ ತಾಲೂಕಿನ 66 ಗ್ರಾಪಂ, ತಾಪಂ ಮತ್ತು ಪುರಸಭೆಗಳಿಗೆ ಆಮಂತ್ರಣ ಪತ್ರಿಕೆಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಪಂ ಅಧ್ಯಕ್ಷ ರಘು ತಿಂಗಳಾಯ, ರಾಜ್ಯ ಮುಜರಾಯಿ ಮತ್ತು ಮೀನುಗಾರಿಕಾ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ ತಂಡ ಎಲ್ಲಾ ಗ್ರಾಪಂಗಳಿಗೆ ಭೇಟಿ ನೀಡಿ ಹೊಳಪು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಯನ್ನು ಗ್ರಾಪಂಗೆೆ ವಿತರಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಮಂತ್ರಿಸಿತು.

ಈ ಬಾರಿಯೂ ಪಥಸಂಚಲನ ಕಾರ್ಯಕ್ರಮವು ವಿಶೇಷವಾಗಿ ನಡೆಯಲಿದ್ದು, ಪ್ರಥಮ ಪ್ರಶಸ್ತಿ 25,000 ರೂ. ಮತ್ತು ಶಾಶ್ವತ ಫಲಕ, ದ್ವಿತೀಯ ಬಹುಮಾನ 15,000 ರೂ. ಮತ್ತು ಶಾಶ್ವತ ಫಲಕ, ತೃತೀಯ ಬಹುಮಾನ 10,000 ರೂ. ಮತ್ತು ಶಾಶ್ವತ ಫಲಕ ನೀಡಲಾಗುವುದು.

ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟ, ತ್ರೋಬಾಲ್, ಓಟ, ಗುಂಡೆಸತ, ಸೂಪರ್ ಮಿನಿಟ್, ಛದ್ಮವೇಷ ಸ್ಪರ್ಧೆ ಮುಂತಾದ ಸ್ಪರ್ಧೆಗಳು ನಡೆಯಲಿದ್ದು, ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಲಾಗುವುದು. ಭಾಗವಹಿಸುವಎಲ್ಲಾ ಗ್ರಾಪಂಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುವುದು. ಅಲ್ಲದೇ ಉಭಯ ಜಿಲ್ಲೆಗಳಲ್ಲಿ ಗಾಂಧಿ ಗ್ರಾಮ ಪ್ರಶಸ್ತಿ ಪಡೆವ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗ್ರಾಪಂಗಳಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಹೊಳಪು ಕ್ರೀಡಾಕೂಟದ ಸಂಚಾಲಕ ಕೋಟ ಶ್ರೀನಿವಾ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News