ಗ್ರೆಟಾ ತನ್‌ಬರ್ಗ್ ‘ಟೈಮ್’ನ 2019ರ ವರ್ಷದ ವ್ಯಕ್ತಿ

Update: 2019-12-11 16:49 GMT

ವಾಶಿಂಗ್ಟನ್, ಡಿ. 11: ಸ್ವೀಡನ್‌ನ ಹದಿಹರಯದ ಪರಿಸರ ಕಾರ್ಯಕರ್ತೆ ಗ್ರೆಟಾ ತನ್‌ಬರ್ಗ್‌ರನ್ನು ‘ಟೈಮ್’ ಮ್ಯಾಗಝಿನ್‌ನ 2019ರ ‘ವರ್ಷದ ವ್ಯಕ್ತಿ’ ಎಂಬುದಾಗಿ ಬುಧವಾರ ಹೆಸರಿಸಲಾಗಿದೆ.

ಕಳೆದ ಒಂದು ವರ್ಷದಲ್ಲಿ ಬಾಲ ಪರಿಸರ ಕಾರ್ಯಕರ್ತೆ ಬೃಹತ್ ಪರಿಸರ ಹೋರಾಟಗಾರ್ತಿಯಾಗಿ ರೂಪುಗೊಂಡಿದ್ದಾರೆ. ಕಳೆದ ವರ್ಷ ಸ್ವೀಡನ್ ಸಂಸತ್ತಿನ ಹೊರಗೆ ಶುಕ್ರವಾರದಂದು ಜಾಗತಿಕ ತಾಪಮಾನದ ವಿರುದ್ಧ ಏಕಾಂಗಿಯಾಗಿ ಪ್ರತಿಭಟನೆ ನಡೆಸಲು ಆರಂಭಿಸಿದ ಅವರ ಚಳವಳಿ ಜಾಗತಿಕ ಯುವ ಚಳವಳಿಯಾಗಿ ರೂಪುಗೊಂಡಿತು. ಹವಾಮಾನ ಬದಲಾವಣೆಗೆ ಸಂಬಂಧಿಸಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಜಾಗತಿಕ ನಾಯಕರನ್ನು ಒತ್ತಾಯಿಸುತ್ತಿದ್ದಾರೆ.

‘‘ಮಾನವ ಕುಲವು ಹೊಂದಿರುವ ಏಕೈಕ ಮನೆಯೊಂದಿಗೆ ನಾವು ಹೊಂದಿರುವ ಆಕ್ರಮಣಕಾರಿ ಸಂಬಂಧದ ಬಗ್ಗೆ ಎಚ್ಚರಿಕೆ ನೀಡಿರುವುದಕ್ಕಾಗಿ ಹಾಗೂ ಹೊಸ ತಲೆಮಾರೊಂದು ನಾಯಕತ್ವ ತೆಗೆದುಕೊಂಡಾಗ ಏನಾಗಬಹುದು ಎನ್ನುವುದನ್ನು ನಮಗೆ ತೋರಿಸಿರುವುದಕ್ಕಾಗಿ ಗ್ರೆಟಾ ತನ್‌ಬರ್ಗ್‌ಗೆ ಪ್ರಶಸ್ತಿ ನೀಡಲಾಗಿದೆ’’ ಎಂದು ‘ಟೈಮ್’ ಮ್ಯಾಗಝಿನ್‌ನ ಪ್ರಧಾನ ಸಂಪಾದಕ ಎಡ್ವರ್ಡ್ ಫೆಲ್ಸೆಂತಲ್ ಹೇಳಿದ್ದಾರೆ.

ಸ್ಪೇನ್ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ಗ್ರೆಟಾ ತನ್‌ಬರ್ಗ್ ಈಗ ಮ್ಯಾಡ್ರಿಡ್‌ನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News