‘ಜನಾಂಗೀಯ ಹತ್ಯೆ’ ನಿಲ್ಲಿಸುವಂತೆ ಸೂ ಕಿಗೆ ಕರೆ

Update: 2019-12-11 16:34 GMT

ದ ಹೇಗ್ (ನೆದರ್‌ಲ್ಯಾಂಡ್ಸ್), ಡಿ. 11: ಮ್ಯಾನ್ಮಾರ್‌ನ ರೊಹಿಂಗ್ಯಾ ಅಲ್ಪಸಂಖ್ಯಾತರ ‘ಜನಾಂಗೀಯ ಹತ್ಯೆ’ಯನ್ನು ನಿಲ್ಲಿಸುವಂತೆ ಆ ದೇಶದ ನಾಗರಿಕ ಸರಕಾರದ ನಾಯಕಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಆಂಗ್ ಸಾನ್ ಸೂ ಕಿಯನ್ನು ನೆದರ್‌ಲ್ಯಾಂಡ್ಸ್‌ನ ದ ಹೇಗ್‌ನಲ್ಲಿರುವ ವಿಶ್ವಸಂಸ್ಥೆಯ ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ ಮಂಗಳವಾರ ಒತ್ತಾಯಿಸಲಾಗಿದೆ.

ರೊಹಿಂಗ್ಯಾ ಹತ್ಯಾಕಾಂಡಕ್ಕೆ ಸಂಬಂಧಿಸಿ ಆಫ್ರಿಕದ ದೇಶ ಗ್ಯಾಂಬಿಯ, ಮ್ಯಾನ್ಮಾರ್ ವಿರುದ್ಧ ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ ಹೂಡಿರುವ ದಾವೆಯ ವಿಚಾರಣೆಯಲ್ಲಿ ತನ್ನ ದೇಶದ ಪರವಾಗಿ ವಾದಿಸುವ ತಂಡದ ನೇತೃತ್ವವನ್ನು ವಹಿಸಿ ಅವರು ಅಂತರ್‌ರಾಷ್ಟ್ರೀಯ ನ್ಯಾಯಾಲಯಕ್ಕೆ ಆಗಮಿಸಿದಾರೆ.

‘‘ಈ ವಿವೇಚನಾರಹಿತ ಹತ್ಯೆಗಳನ್ನು, ಈ ಅಮಾನುಷ ಕೃತ್ಯಗಳನ್ನು ನಿಲ್ಲಿಸುವಂತೆ ಮ್ಯಾನ್ಮಾರ್‌ಗೆ ಹೇಳಿ. ಇದು ನಮ್ಮ ಒಟ್ಟು ಅಂತಃಸಾಕ್ಷಿಯನ್ನು ಘಾಸಿಗೊಳಿಸಿವೆ. ತನ್ನದೇ ಜನರ ಜನಾಂಗೀಯ ಹತ್ಯೆಯನ್ನು ನಿಲಿಸುವಂತೆ ಆ ದೇಶಕ್ಕೆ ಹೇಳಿ’’ ಎಂದು ಗ್ಯಾಂಬಿಯದ ಕಾನೂನು ಸಚಿವ ಅಬೂಬಕರ್ ತಂಬಾಡು ನ್ಯಾಯಾಲಯಕ್ಕೆ ಮನವಿ ಮಾಡಿದರು.

‘‘ನಮ್ಮ ಕಣ್ಣೆದುರಿನಲ್ಲೇ ಇನ್ನೊಂದು ಜನಾಂಗೀಯ ಹತ್ಯೆ ಅನಾವರಣಗೊಳ್ಳುತ್ತಿದೆ. ಆದರೂ ಅದನ್ನು ನಿಲ್ಲಿಸಲು ನಾವು ಏನೂ ಮಾಡುತ್ತಿಲ್ಲ’’ ಎಂದು ಅವರು ಹೇಳಿದರು.

‘‘ಒಂದೊಂದು ದಿನದ ವಿಳಂಬವೂ ಇನ್ನಷ್ಟು ಜನರ ಹತ್ಯೆಗೆ, ಇನ್ನಷ್ಟು ಮಹಿಳೆಯರ ಅತ್ಯಾಚಾರಕ್ಕೆ ಹಾಗೂ ಇನ್ನಷ್ಟು ಮಕ್ಕಳು ಜೀವಂತ ಸುಟ್ಟು ಹೋಗುವುದಕ್ಕೆ ಕಾರಣವಾಗುತ್ತದೆ. ಯಾವ ಕಾರಣಕ್ಕಾಗಿ? ಕೇವಲ ಅವರು ನೋಡಲಿಕ್ಕೆ ಭಿನ್ನವಾಗಿದ್ದಾರೆ ಎನ್ನುವುದಕ್ಕಾಗಿಯೇ?’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News