ಚಿನ್ನಾಭರಣ ಕಳವು ಪ್ರಕರಣ: ಮತ್ತೋರ್ವ ಆರೋಪಿ ಸೆರೆ

Update: 2019-12-11 16:45 GMT

 ಮಂಗಳೂರು : ನಗರದ ಬಲ್ಮಠ- ಬೆಂದೂರ್ ರಸ್ತೆಯ ಅಪಾರ್ಟ್‌ಮೆಂಟ್‌ ಒಂದರ 6ನೇ ಮಹಡಿಯಲ್ಲಿರುವ ಅನಿತಾ ಎನ್. ಶೆಟ್ಟಿ ಅವರ ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇನ್ನೋರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಮಂಗಳೂರಿನ ರಾಜೇಂದ್ರ ಪವಾರ್ (35) ಬಂಧಿತ ಆರೋಪಿ. ಈಗಾಗಲೇ ಬಂಧಿತರಾದ ಆರೋಪಿಗಳು ಕಳವು ಮಾಡಿದ್ದ ಚಿನ್ನವನ್ನು ಮಾರಾಟ ಮಾಡುವ ಸಂದರ್ಭ ಅದನ್ನು ಸ್ವೀಕರಿಸಿದ ಆರೋಪ ಈತನ ಮೇಲಿದೆ.

ಬಂಧಿಸಲು ಹೋದಾಗ ಕರ್ತವ್ಯಕ್ಕೆ ಅಡ್ಡಿ: ಆರೋಪಿ ರಾಜೇಂದ್ರ ಪವಾರ್ ಆಟೋ ರಿಕ್ಷಾವೊಂದರಲ್ಲಿ ಸ್ನೇಹಿತ ಬೆಂಗಳೂರಿನ ಬಾಬು (43) ಜತೆ ನಗರದಲ್ಲಿ ಸಂಚರಿಸುತ್ತಿದ್ದಾನೆ ಎಂದು ಮಾಹಿತಿ ಪಡೆದ ಮಂಗಳೂರು ನಗರದ ಕೇಂದ್ರ ಉಪ ವಿಭಾಗದ ರೌಡಿ ನಿಗ್ರಹ ದಳ ಮತ್ತು ಕದ್ರಿ ಪೊಲೀಸರು ರಿಕ್ಷಾವನ್ನು ಬೆನ್ನಟ್ಟಿದ್ದರು. ಬೆಸೆಂಟ್ ಜಂಕ್ಷನ್ ಬಳಿ ತಡೆದು ನಿಲ್ಲಿಸಿ ವಶಕ್ಕೆ ಪಡೆಯಲು ಯತ್ನಿಸಿದಾಗ ರಾಜೇಂದ್ರ ಪವಾರ್ ಜತೆಗಿದ್ದ ಬಾಬು ‘ರಾಜೇಂದ್ರನನ್ನು ಬಂಧಿಸುವುದೇಕೆ? ಆತ ಏನು ತಪ್ಪು ಮಾಡಿದ್ದಾನೆ?’ ಎಂದು ಪ್ರಶ್ನಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದನೆಂದು ಆರೋಪಿಸಲಾಗಿದೆ.

ಅಲ್ಲದೆ, ಬಳಿಕ ಮಹಜರು ನಡೆಸುವಾಗಲೂ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದಾನೆ ಎಂದು ಆಪಾದಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಾಬು ನನ್ನು ಬರ್ಕೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಬಾಬು ಬೆಂಗಳೂರಿನ ಚಿನ್ನ ಮತ್ತು ಬೆಳ್ಳಿ ಆಭರಣ ಮಾರಾಟಗಾರರ ಸಂಘದ ಪದಾಧಿಕಾರಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ರಾಜೇಂದ್ರ ಪವಾರ್‌ನನ್ನು ಕದ್ರಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ರಾಜೇಂದ್ರ ಪವಾರ್ ಈ ಹಿಂದೆ ಬಂದರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಹವಾಲಾ ಹಣ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ರಾಜೇಂದ್ರ ಪವಾರ್‌ನ ಬಂಧನದೊಂದಿಗೆ ಈ ಚಿನ್ನ ಕಳವು ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಸಂಖ್ಯೆ ಎಂಟಕ್ಕೇರಿದೆ. ಡಿ.5ರಂದು ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನೂ ಓರ್ವ ಆರೋಪಿ ಬಂಧನಕ್ಕೆ ಬಾಕಿ ಇದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಾದ ರಾಕೇಶ್ ಬೋನಿಪಾಸ್ ಡಿಸೋಜ, ಅಶೋಕ್ ಪಂಡ್ರೇಕರ್, ಗಣೇಶ್ ಬಾಪು ಪರಾಬ್, ಶಾಹೀರ್ ಮುಹಮ್ಮದ್, ಜನಾರ್ದನ ಆಚಾರ್ಯ, ಚಂದನ್ ಆಚಾರ್ಯ ಮತ್ತು ಪುರುಷೊತ್ತಮ ಆಚಾರ್ಯ ಅವರನ್ನು ಪೊಲೀಸರು ಡಿ.5ರಂದು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News