ಹೊಸ ವರ್ಷಾಚರಣೆ: ಹೊಟೇಲ್‌ಗಳಿಗೆ ಪೂರ್ವಾನುಮತಿ ಕಡ್ಡಾಯ

Update: 2019-12-11 16:49 GMT

ಮಂಗಳೂರು, ಡಿ.11: ಪ್ರಸಕ್ತ 2020ರ ಹೊಸ ವರ್ಷದ ಆಚರಣೆಯ ಸಂಬಂಧ ಮಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ-ಸಂಸ್ಥೆಗಳು ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ನಗರದ ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ-ಸಂಸ್ಥೆಗಳ ಮಾಲಕರು/ ವ್ಯವಸ್ಥಾಪಕರು ನೂತನ ವರ್ಷಾಚರಣೆ ಆಚರಿಸಲು ಸಂತೋಷ ಕೂಟಗಳನ್ನು ಏರ್ಪಡಿಸಲು ಇಚ್ಚಿಸಿದಲ್ಲಿ ಡಿ.24ರಂದು ಸಂಜೆ 4 ಗಂಟೆಯೊಳಗೆ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ, ಪೂರ್ವಾನುಮತಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ.

ಎಲ್ಲ ಕಾರ್ಯಕ್ರಮಗಳನ್ನು ಮಧ್ಯರಾತ್ರಿ 12 ಗಂಟೆಯೊಳಗೆ ಕಡ್ಡಾಯವಾಗಿ ಮುಕ್ತಾಯಗೊಳಿಸಬೇಕು. ಹೊಸ ವರ್ಷಾಚರಣೆಯ ಕಾರ್ಯಕ್ರಮಗಳನ್ನು ಆಯೋಜಿಸುವವರು ಸಂಬಂಧಪಟ್ಟ ಇಲಾಖೆಗಳಿಂದ ಪಡೆದ ಪರವಾನಿಗೆಯಲ್ಲಿ ನೀಡಿದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೊಸ ವರ್ಷಾಚರಣೆಯ ಕಾರ್ಯಕ್ರಮಗಳನ್ನು ಆಯೋಜಿಸುವವರು ತುರ್ತು ಪರಿಸ್ಥಿತಿ ಎದುರಿಸಲು ಅಗ್ನಿಶಾಮಕ ಉಪಕರಣ, ತುರ್ತು ಚಿಕಿತ್ಸಾ ವಾಹನ ಸಹಿತ ಇತರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

ಆಯೋಜಕರು ಮಹಿಳೆಯರ ಸುರಕ್ಷತೆಗಾಗಿ ಪ್ರತ್ಯೇಕ ಮಹಿಳಾ ಭದ್ರತಾ ಸಿಬ್ಬಂದಿಯನ್ನು ಕಡ್ಡಾಯವಾಗಿ ನೇಮಿಸಬೇಕು. ಸ್ಥಳದ ಮುಖ್ಯದ್ವಾರ, ಒಳ ಆವರಣ ಮತ್ತು ಹೊರ ಆವರಣಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು.

ಸಾಂಸ್ಕೃತಿಕ ಕಾರ್ಯಕ್ರಮ ನೆಪದಲ್ಲಿ ಅಶ್ಲೀಲ, ಅರೆಬೆತ್ತಲೆ ಅಥವಾ ಬೆತ್ತಲೆ ನೃತ್ಯ, ಜೂಜಾಟ ನಿಷೇಧಿಸಲಾಗಿದೆ. ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಶುಭಕೋರುವ ನೆಪದಲ್ಲಿ ಕೀಟಲೆ/ಅಸಭ್ಯವಾಗಿ ವರ್ತಿಸುವುದನ್ನು ತಡೆಯಲು ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ. ಕಾರ್ಯಪಡೆಯು ಕಾರ್ಯನಿರತವಾಗಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News