ಪೆರ್ಲ ಶಾಲಾ ಬಾವಿಗೆ ವಿಷ ಹಾಕಿದ ಪ್ರಕರಣ : ಪೋಷಕರಿಂದ ಪ್ರತಿಭಟನೆ

Update: 2019-12-11 16:57 GMT

ಉಪ್ಪಿನಂಗಡಿ: ಶಿಬಾಜೆ ಗ್ರಾಮದ ಪೆರ್ಲ ಸರಕಾರಿ ಶಾಲೆಯ ಬಾವಿಗೆ ವಿಷ ಹಾಕಿದ ಪ್ರಕರಣವನ್ನು ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ಆರೋಪಿಗಳ ಪತ್ತೆ ಕಾರ್ಯ ಇನ್ನೂ ಸಾಧ್ಯವಾಗಿಲ್ಲ ಎಂದು ಆರೋಪಿಸಿದ ಅಲ್ಲಿನ ಪೋಷಕರು ಡಿ.13ರಂದು ಶಾಲೆಗೆ ಬೀಗ ಜಡಿದು ಪ್ರತಿಭಟಿಸುವ ನಿರ್ಧಾರ ತಳೆದಿದ್ದು, ಇದರ ಮೊದಲೇ ತಮ್ಮ ಮಕ್ಕಳನ್ನು ಶಾಲೆಗೆ ಹಾಗೂ ಅಂಗನವಾಡಿಗೆ ಕಳುಹಿಸದೇ ಅಸಹಕಾರ ತೋರಿದ್ದಾರೆ.

ಶಾಲಾ ಮಕ್ಕಳ ಪೋಷಕರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಮಂಗಳವಾರ ತುರ್ತು ಸಭೆ ನಡೆಸಿದ್ದು, ಈ ಸಂದರ್ಭ ಈ ಪ್ರಕರಣವನ್ನು ಇಲಾಖೆಗಳು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಆರೋಪಿಗಳ ಪತ್ತೆ ಕಾರ್ಯ ಇನ್ನೂ ಸಾಧ್ಯವಾಗಿಲ್ಲ ಎಂಬ ಬಗ್ಗೆ ಆಕ್ರೋಶ ವ್ಯಕ್ತವಾಯಿತ್ತಲ್ಲದೆ, ಡಿ.13ರಂದು ಮಕ್ಕಳನ್ನು ಶಾಲೆಗೆ ಕಳುಹಿಸದೇ ಶಾಲೆಗೆ ಬೀಗ ಜಡಿದು ರಸ್ತೆಯಲ್ಲಿ ಪ್ರತಿಭಟನೆ ನಡೆಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ಅದಕ್ಕೆ ಪೂರ್ವಭಾವಿಯಾಗಿ ಡಿ.11ರಂದೇ ಪೋಷಕರು ಶಾಲೆಗೆ ಹಾಗೂ ಶಾಲಾ ವಠಾರದಲ್ಲೇ ಇರುವ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಿಕೊಡಲಿಲ್ಲ. ಇದರಿಂದ ಶಾಲೆ ಮಕ್ಕಳಿಲ್ಲದೆ ಬಿಕೋ ಎನ್ನುವಂತಾಯಿತು. ಪೋಷಕರು ಹಾಗೂ ಗ್ರಾಮಸ್ಥರ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಯೋಜನೆ ರೂಪಿಸಿದ್ದು, ಡಿ.13ರಂದು ನಡೆಸುವ ಪ್ರತಿಭಟನೆಯ ಕುರಿತಾಗಿ ಈಗಾಗಲೇ ಇಲಾಖೆಗಳಿಗೆ ಮಾಹಿತಿ ನೀಡುವ ಕಾರ್ಯ ನಡೆಯುತ್ತಿದೆ. ಸದ್ರಿ ಶಾಲೆಯಲ್ಲಿ 64 ವಿದ್ಯಾರ್ಥಿಗಳಿದ್ದು, ಈ ಪ್ರಕರಣದ ಸತ್ಯಾಂಶ ಶೀಘ್ರವಾಗಿ ಹೊರಬರದಿದ್ದಲ್ಲಿ ಸರಕಾರಿ ಶಾಲೆಯೊಂದು ವಿಶ್ವಾಸ ಕಳೆದುಕೊಂಡು ಮುಚ್ಚುವ ಭೀತಿಯೂ ಎದುರಾಗಿದೆ.

ಇವತ್ತು ಮಕ್ಕಳನ್ನು ಶಾಲೆಗೆ ಕಳುಹಿಸದೇ ಅಸಹಕಾರ ತೋರಿದರೂ ಶಿಕ್ಷಣ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದಿಲ್ಲ ಎಂಬ ಆರೋಪ ಪೋಷಕರಿಂದ ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News