ಹೆಚ್ಚು ವೇಗದಲ್ಲಿ ಬಿಸಿ, ಅಪಾಯಕಾರಿಯಾಗುತ್ತಿರುವ ಭೂಮಿ: ಗುಟೆರಸ್

Update: 2019-12-12 15:55 GMT

ಮ್ಯಾಡ್ರಿಡ್ (ಸ್ಪೇನ್), ಡಿ. 12: ಜಗತ್ತು ಹಿಂದೆ ಭಾವಿಸಿರುವುದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಬಿಸಿಯಾಗುತ್ತಿದೆ ಹಾಗೂ ಹೆಚ್ಚು ಅಪಾಯಕಾರಿಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಬುಧವಾರ ಹೇಳಿದ್ದಾರೆ.

ಸ್ಪೇನ್ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಿಒಪಿ25 ಪರಿಸರ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.

ಪ್ಯಾರಿಸ್ ಪರಿಸರ ಒಪ್ಪಂದದ ಗುರಿಗಳನ್ನು ವಾಸ್ತವಿಕವಾಗಿಸುವ ನಿಟ್ಟಿನಲ್ಲಿ 2020ರಲ್ಲಿ ಇಂಗಾಲದ ಡೈ ಆಕ್ಸೈಡ್ ಮಾಲಿನ್ಯದಲ್ಲಿ ಹೆಚ್ಚಳವಾಗದಂತೆ ನೋಡಿಕೊಳ್ಳಬೇಕು ಎಂದು ಅವರು ದೇಶಗಳನ್ನು ಒತ್ತಾಯಿಸಿದರು.

ಪ್ಯಾರಿಸ್‌ನಲ್ಲಿ 2015ರಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಸಮ್ಮೇಳನ ಸಿಒಪಿ 21ರಲ್ಲಿ 195 ದೇಶಗಳು ಪ್ಯಾರಿಸ್ ಪರಿಸರ ಒಪ್ಪಂದವನ್ನು ಅನುಮೋದಿಸಿದ್ದವು. ವಾತಾವರಣದ ತಾಪಮಾನವನ್ನು ಹೆಚ್ಚಿಸುವ ಇಂಗಾಲದ ಡೈ ಆಕ್ಸೈಡ್ ಅನಿಲ ಉತ್ಪಾದನೆಯಲ್ಲಿ ಕಡಿತ ಮಾಡುವುದಕ್ಕಾಗಿ ಒಪ್ಪಂದದಲ್ಲಿ ಹೆಚ್ಚಿನ ಒತ್ತು ನೀಡಲಾಗಿತ್ತು.

ಅಮೆರಿಕವನ್ನು ಹೊರತುಪಡಿಸಿ ಜಿ20 ಗುಂಪಿನ 19 ದೇಶಗಳು ಒಪ್ಪಂದವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ಬದ್ಧತೆಯನ್ನು ವ್ಯಕ್ತಪಡಿಸಿವೆ.

‘‘ನಾವು ಹಿಂದೆಂದೂ ಯೋಚಿಸಿರದಷ್ಟು ವೇಗದಲ್ಲಿ ಜಗತ್ತು ಬಿಸಿಯಾಗುತ್ತಿದೆ ಮತ್ತು ಅಪಾಯಕಾರಿಯಾಗುತ್ತಿದೆ. ಬದಲಾಯಿಸಲಾಗದ ಬದಲಾವಣೆಗಳನ್ನು ನಾವು ನೋಡುತ್ತಿದ್ದೇವೆ ಹಾಗೂ ಅವುಗಳು ನಮ್ಮತ್ತ ಧಾವಿಸಿ ಬರುತ್ತಿವೆ’’ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News