ದ.29: ಹನುಮಗಿರಿಯಲ್ಲಿ 'ಭಜನಾ ಸಂಭ್ರಮ -2019' ಸಮಾವೇಶ

Update: 2019-12-13 12:33 GMT

ಪುತ್ತೂರು: ಮಂಗಳೂರು ವಿಭಾಗದ ಭಜನಾ ಮಹಾಮಂಡಲ ಹಾಗೂ ಹುನುಮಗಿರಿ ಕ್ಷೇತ್ರದ ಸಂಯುಕ್ತ ಆಶ್ರಯದಲ್ಲಿ ಡಿ.29ರಂದು ದ.ಕ.ಉಡುಪಿ, ಕೊಡಗು,ಕಾಸರಗೋಡು ಭಾಗದ ಸಾವಿರಕ್ಕೂ ಮಿಕ್ಕಿದ ಭಜನಾ ತಂಡಗಳ ಕೂಡುವಿಕೆಯೊಂದಿಗೆ 'ಭಜನಾ ಸಂಭ್ರಮ-2019' ಸಮಾವೇಶ ನಡೆಯಲಿದ್ದು, ಇದೊಂದು ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಿರ್ಮಿಸುವ ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ತಿಳಿಸಿದ್ದಾರೆ.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಾಮಾಜಿಕ ಕಳಕಳಿಯುಳ್ಳ ಭಜನಾ ಮಂಡಳಿಗಳು ಒಂದೆಡೆ ಸೇರಿ ಸಮಾಜಮುಖಿ ಚಟುವಟಿಕೆಗಳಿಗೆ ಇನ್ನಷ್ಟು ಶಕ್ತಿ ತುಂಬುವ ಹಾಗೂ ಹೊಸ ಚಟುವಟಿಕೆಗಳ ಕುರಿತು ಸಂಕಲ್ಪ ಕೈಗೊಳ್ಳುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಜನಾ ಸಂಭ್ರಮದ ಕೇಂದ್ರ ಬಿಂದು ಕಾರ್ಯಕ್ರಮ ಅಂದು ಸಂಜೆ 6.12ಕ್ಕೆ ಶಂಖೋದ್ಘೋಷದೊಂದಿಗೆ ಆರಂಭಗೊಳ್ಳಲಿದೆ. ಸಾವಿರಕ್ಕೂ ಮಿಕ್ಕ ಭಜನಾ ಮಂಡಳಿಗಳ 5ಸಾವಿರ ಕಾರ್ಯಕರ್ತರು ಭಜನಾಂಗಣದಲ್ಲಿ ಸಾವಿರ ದೀಪಗಳನ್ನು ಬೆಳಗಿಸಿ, 5ಸಾವಿರ ಹಣತೆಗಳನ್ನು ಹಚ್ಚಿ ಏಕಕಾಲದಲ್ಲಿ ಆಯ್ದ 6 ಭಜನೆಗಳನ್ನು ಹಾಡುವ ಈ ಐತಿಹಾಸಿಕ ಕಾರ್ಯಕ್ರಮ 45 ನಿಮಿಷಗಳ ಕಾಲ ನಡೆಯಲಿದೆ. 1200ರಷ್ಟು ಭಜನಾ ಮಂಡಳಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. 20ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.                          

ಸಂಜೆ 4.45ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೇಂದ್ರದ ಪಶುಸಂಗೋಪನಾ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಪ್ರತಾಪಚಂದ್ರ ಸಾರಂಗಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಅವರು ಪ್ರಧಾನ ಭಾಷಣ ಮಾಡುಲಿದ್ದಾರೆ. ಭಜನಾ ಸಂಭ್ರಮ ಸ್ವಾಗತ ಸಮಿತಿಯ ಅಧ್ಯಕ್ಷ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಅವರು ಅಧ್ಯಕ್ಷತೆ ವಹಿಸುವರು ಎಂದು ನನ್ಯ ಅಚ್ಚುತ ಮೂಡೆತ್ತಾಯ ಅವರು ತಿಳಿಸಿದರು.

ಸಂಜೆ 3 ಗಂಟೆಗೆ ಈಶ್ವರಮಂಗಲ ಪಂಚಲಿಂಗೇಶ್ವರ ದೇವಾಲಯ ಹಾಗೂ ಈಶ್ವರಮಂಗಲ ಗ್ರಾಮ ಪಂಚಾಯಿತಿ ಕಚೇರಿ ಬಳಿಯಿಂದ ಏಕಕಾಲದಲ್ಲಿ ಎರಡು  ಕಡೆಗಳಿಂದ ಭಜನಾಂಗಣಕ್ಕೆ ಶೋಭಾ ಯಾತ್ರೆ ನಡೆಯಲಿದೆ. ಶೋಭಾ ಯಾತ್ರೆಯಲ್ಲಿ ಕುಣಿತ ಭಜನೆಗೆ ಅವಕಾಶವಿದೆ. ಭಜನಾ ಮಂಡಳಿಗಳ ಎಲ್ಲರೂ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವರು. ರಾತ್ರಿ 7.30ರಿಂದ ಆಳ್ವಾಸ್ ದೇಶಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ. 

ಡಿ.15 ಬೆಳಿಗ್ಗೆ 10 ಗಂಟೆಗೆ ಚಪ್ಪರ ಮುಹೂರ್ತ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಚಪ್ಪರ ಮುಹೂರ್ತ ನೆರವೇರಿಸಲಿದ್ದಾರೆ ಎಂದು ಮೂಡೆತ್ತಾಯ ಅವರು ತಿಳಿಸಿದರು. 

ಸುದ್ದಿಗೋಷ್ಟಿಯಲ್ಲಿ ಭಜನಾ ಸಂಭ್ರಮ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಹಜ್ ರೈ ಬಳೆಜ್ಜ, ವಿಭಾಗ ಸಂಯೋಜಕ ಪ್ರವೀಣ್ ಸರಳಾಯ,ನಿರ್ವಹಣಾ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ್ ರೈ, ಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಹಾಜರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News