ಪುತ್ತೂರು ಎಪಿಎಂಸಿಗೆ ಲೋಕಾಯುಕ್ತ ಡಿವೈಎಸ್‍ಪಿ ಭೇಟಿ, ಪರಿಶೀಲನೆ

Update: 2019-12-13 12:35 GMT

ಪುತ್ತೂರು: ರಾಜ್ಯಾದಾದ್ಯಂತ ಎಲ್ಲಾ ಎಪಿಎಂಸಿಗಳಿಗೆ ಭೇಟಿ ನೀಡಿ ಅಲ್ಲನ ಕಾರ್ಯ ಚಟುವಟಿಕೆಯನ್ನು ಪರಿಶೀಲಿಸಿ ವರದಿ ನೀಡುವಂತೆ ಲೋಕಾಯುಕ್ತ ಇಲಾಖೆ ನೀಡಿರುವ ಆದೇಶದಂತೆ ಶುಕ್ರವಾರ ಪುತ್ತೂರು ಎಪಿಎಂಸಿಗೆ ಭೇಟಿ ನೀಡಿದ ಲೋಕಾಯುಕ್ತ ಡಿವೈಎಸ್‍ಪಿ ವಿಜಯ ಪ್ರಸಾದ್ ಅವರು ಇಲ್ಲಿನ ಕಾರ್ಯ ಚಟುವಟಿಕೆಗಳನ್ನು ಪರಿಶೀಲನೆ ನಡೆಸಿದರು. 

ಈ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಡಿವೈಎಸ್‍ಪಿ ವಿಜಯ ಪ್ರಸಾದ್ ಅವರು ಕೃಷಿ ಸಂಬಂಧಿಸಿದ ವ್ಯವಹಾರಗಳಿಗೆ ರೈತರಿಗೆ ಅಥವಾ ವರ್ತಕರಿಗೆ ಎಪಿಎಂಸಿಯಿಂದ ಯಾವುದೇ ತೊಂದರೆ, ಕಿರುಕುಳಗಳು ಉಂಟಾದಲ್ಲಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಬಹುದಾಗಿದೆ. ಕೃಷಿ ಸವಲತ್ತುಗಳು ಸುಲಭವಾಗಿ ಕೃಷಿಕರ ಕೈ ಸೇರಬೇಕು. ಅದಕ್ಕಾಗಿ ರೈತರಿಗೆ ಸರಿಯಾದ ಮಾಹಿತಿ ನೀಡಬೇಕು. ತಾನು ಬೆಳೆದ ಕೃಷಿ ಉತ್ಪನ್ನಗಳಿಗೆ ಉತ್ತಮ ಧಾರಣೆ ದೊರೆಯಬೇಕು. ಕೃಷಿ ಉತ್ಪನ್ನಗಳು ಸುಲಭವಾಗಿ ಸರಬರಾಜು ಆಗಬೇಕು. ಈ ಸಂದರ್ಭದಲ್ಲಿ ರೈತರಿಗಾಗಲಿ, ವರ್ತಕರಿಗಾಗಲಿ ಎಪಿಎಂಸಿಯಿಂದ ಏನಾದರೂ ತೊಂದರೆಗಳು ಉಂಟಾದಲ್ಲಿ ನೇರವಾಗಿ ಲೋಕಾಯುಕ್ತರಿಗೆ ದೂರು ನೀಡಬಹುದು. ಅಲ್ಲದೆ ಎಪಿಎಂಸಿ ಅಧಿಕಾರಿ ಹಾಗೂ ಸಿಬಂದಿಗಳಿಗೂ ತೊಂದರೆಗಳು ಉಂಟಾದಲ್ಲಿ ಅವರೂ ದೂರು ನೀಡಬಹುದು. ಸಾರ್ವಜನಿಕವಾಗಿ ಬರುವ ದೂರುಗಳನ್ನು ಇಲಾಖೆ ಮೇಲಾಧಿಕಾರಿಗಳ ತಿಳಿಸಿ ಅವುಗಳನ್ನು ಪರಿಹರಿಸಿಕೊಡಲಾಗುವುದು ಎಂದರು.

ಪ್ರಸ್ತುತ ನೀರುಳ್ಳಿ ಧಾರಣೆ ಏರಿಕೆಯಾಗಿದ್ದು ಅಕ್ತಮ ದಾಸ್ತಾನುಗಳಿರುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ.  ಇಲ್ಲಿ ಸಣ್ಣ ಪುಟ್ಟ ದಾಸ್ತಾನು ಮಾತ್ರವೇ ಕಂಡುಬಂದಿದೆ. ಎಪಿಎಂಸಿಯಲ್ಲಿ ಹುದ್ದೆಗಳು ಖಾಲಿಯಿಂದ ನಿರ್ವಹಣೆ ಕಷ್ಟಕರವಾಗಿದೆ. ಹುದ್ದೆಗಳು ಭರ್ತಿಗೊಂಡಲ್ಲಿ ಇಲಾಖೆಯ ಎಲ್ಲಾ ಕೆಲಸಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಲು ಸಾಧ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಈ  ಬಗ್ಗೆ ಇಲಾಖೆಯ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಪರಿಹರಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. 

ಲೋಕಾಯುಕ್ತ ಪೊಲೀಸ್ ಸಿಬಂದಿ ಶಶಿಧರ, ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ವಕ್ವಾಡಿ ಪರಿಶೀಲನೆ ವೇಳೆ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News