ಎಡಿಬಿ ನೆರವಿನ ಜಲಸಿರಿ ಯೋಜನೆಗೆ ಒಪ್ಪಿಗೆ: ಶಾಸಕ ವೇದವ್ಯಾಸ ಕಾಮತ್

Update: 2019-12-13 12:55 GMT

ಮಂಗಳೂರು, ಡಿ.13: ನಗರಕ್ಕೆ 24x7 ಕುಡಿಯುವ ನೀರು ಪೂರೈಸುವ ಎಬಿಡಿ ನೆರವಿನ 2ನೇ ಹಂತದ ಜಲಸಿರಿ ಯೋಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ನಗರದಲ್ಲಿ 792.42 ಕೋಟಿ ರೂ. ವೆಚ್ಚದಲ್ಲಿ ಮುಂದಿನ ಮೂರು ವರ್ಷದ ಒಳಗಡೆ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂದಿನ 30 ವರ್ಷಗಳ ಅಗತ್ಯತೆಯನ್ನು ಪರಿಗಣಿಸಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಇರುವ ವ್ಯವಸ್ತೆಯನ್ನು ಉನ್ನತೀಕರಣಗೊಳಿಸಲು ಉದ್ದೇಶಿಸಲಾಗಿದೆ. ಕೆ.ಯು.ಡಿ.ಐ.ಡಿ.ಎಫ್.ಸಿ ವತಿಯಿಂದ ಎಬಿಡಿ ನೆರವಿನ ಕ್ವಿಮಿಪ್ ಯೋಜನೆಯಡಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಕುಟುಂಬಕ್ಕೂ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಈ ಕಾಮಗಾರಿಯ ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡುಗಳ ಪ್ರತಿ ಮನೆಗೂ 24x7 ನಿರಂತರ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಇದಾಗಿದೆ. ಈ ಯೋಜನೆ ಅಡಿಯಲ್ಲಿ ಮಂಗಳೂರಿನ ವಿವಿಧ ಬಡಾವಣೆಗಳಲ್ಲಿ ಹಾಲಿ ಇರುವ ಮೇಲ್ಮಟ್ಟದ ಜಲ ಸಂಗ್ರಹಾಗಾರಗಳ ನಿರ್ಮಾಣ, ಮಂಗಳೂರಿನ ವಿವಿಧ ಬಡಾವಣೆಗಳಲ್ಲಿ ಹಾಲಿಯಿರುವ ನೆಲ ಮಟ್ಟದ ಜಲ ಸಂಗ್ರಹಾಗಾರದ ಜತೆ 2 ಹೆಚ್ಚುವರಿ ವಿವಿಧ ಸಾಮರ್ಥ್ಯಗಳ ನೆಲ ಮಟ್ಟದ ಜಲ ಸಂಗ್ರಹಾಗಾರಗಳ ನಿರ್ಮಾಣ, ಹೆಚ್ಚುವರಿ ಬೂಷ್ಟಿಂಗ್ ಪಂಪೌಹೌಸ್‌ಗಳ ನಿರ್ಮಾಣ ಆಗಲಿದೆ.

ಹಾಲಿ ಇರುವ ಪಣಂಬೂರು ಹಾಗೂ ಬೆಂದೂರಿನಲ್ಲಿರುವ ಫಿಲ್ಟರೇಷನ್ ಯೂನಿಟ್‌ಗಳ ಬದಲು ರಾಮಲಕಟ್ಟೆಯಲ್ಲಿನ 18ಎಂಜಿಡಿ ಸಾಮರ್ಥ್ಯದ ಶುದ್ಧೀಕರಣಗಾರದ ಬಳಿ ಹೊಸದಾಗಿ ಫಿಲ್ಟರೇಶನ್ ಯೂನಿಟ್‌ಗಳನ್ನು ನಿರ್ಮಿಸುವುದು. ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ 20 ಜಲ ಸಂಗ್ರಹಾಗಾರಕ್ಕೆ ಹಾಗೂ ಹಾಲಿಯಿರುವ ಕೆಲವು ಶುದ್ಧ ಕೊಳವೆ ಮಾರ್ಗದ ಸಾಮರ್ಥ್ಯ ಕುಂಠಿತಗೊಂಡಿರುವುದರಿಂದ ಸುಮಾರು 65 ಕಿ.ಮಿ ಕೊಳವೆ ಮಾರ್ಗವನ್ನು ಬದಲಾಯಿಸುವುದು ಹಾಗೂ ಹೊಸ ಕೊಳವೆಗಳನ್ನು ಅಳವಡಿಸುವುದು ಈ ಯೋಜನೆ ಅಡಿಯಲ್ಲಿ ನಡೆಯಲಿದೆ.

ಪ್ರತಿ ಮನೆ ಸಂಪರ್ಕಕ್ಕೆ ಹೊಸದಾದ ಕ್ಲಾಸ್ -ಬಿ ಮಲ್ಟಿಜೆಟ್ ವಾಟರ್ ಮೀಟರ್ ಅಳವಡಿಸಲಾಗುತ್ತದೆ. ಅಲ್ಲದೆ ತುಂಬೆಯ ನೀರು ಶುದ್ಧೀಕರಣ ಘಟಕದಿಂದ ಎಲ್ಲ ಜಲ ಸಂಗ್ರಹಾಗಾರದ ವರೆಗೆ ಗಣಕೀಕರಣಗೊಳಿಸಿ ಎಸ್‌ಸಿಎಡಿಎ ತಂತ್ರಜ್ಞಾನ ಅಳವಡಿಸುವುದು ಎಂದು ಅವರು ಮಾಹಿತಿ ನೀಡಿದರು.

ಈ ಯೋಜನೆಯನ್ನು ಸುಯೇಝ್ ಎಂಬ ಕಂಪನಿ ಗುತ್ತಿಗೆ ಪಡೆದುಕೊಂಡಿದ್ದು, ಮಂಗಳೂರು ಮಹಾನಗರ ಪಾಲಿಕೆ ಜತೆಯಲ್ಲಿ ಈಗಾಗಲೇ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಈ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಯೋಜನೆ ಕಾರ್ಯಗತಗೊಳ್ಳುವುದಕ್ಕಿಂತ ಮೊದಲು ಇಡೀ ನಗರದ ಸರ್ವೆ ನಡೆಯಬೇಕಾಗಿದ್ದು, ಇದಕ್ಕೆ ಸುಮಾರು ಏಳೆಂಟು ತಿಂಗಳು ಸಮಯ ಬೇಕಾಗುತ್ತದೆ.

ಗುತ್ತಿಗೆಯ ಒಟ್ಟು ಮೊತ್ತ ಮೊತ್ತ 792.42 ಕೋಟಿ ರೂ. ಆಗಿದ್ದು, ಇದರಲ್ಲಿ ಕಾಮಗಾರಿ ವೆಚ್ಚ - 587.67 ಕೋಟಿ ರೂ. ಹಾಗೂ 204.75 ಕೋಟಿ ನಿರ್ವಹಣಾ ವೆಚ್ಚ ಸೇರಿದೆ. 8 ವರ್ಷಗಳ ಅವಧಿವರೆಗೆ ಗುತ್ತಿಗೆ ಪಡೆದುಕೊಂಡ ಸಂಸ್ಥೆಯೇ ಇದರ ನಿರ್ವಹಣೆ ಮಾಡಬೇಕಿದೆ.

ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರ್, ಪ್ರೇಮಾನಂದ ಶೆಟ್ಟಿ, ನಿತಿನ್ ಕುಮಾರ್, ಸಂಜಯ್ ಪ್ರಭು, ಭಾಸ್ಕರಚಂದ್ರ ಶೆಟ್ಟಿ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News