ಮಂಗಳೂರು: ಈರುಳ್ಳಿ ದರದಲ್ಲಿ ಇಳಿಮುಖ

Update: 2019-12-13 13:34 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಡಿ.13: ಎರಡು ವಾರಗಳಿಂದ ನಿರಂತರವಾಗಿ ಗ್ರಾಹಕರನ್ನು ಕಾಡಿದ ಈರುಳ್ಳಿಯ ಬೆಲೆ ಇಳಿಮುಖಗೊಳ್ಳುತ್ತಿವೆ. ಕಳೆದ ಎರಡು ವಾರಗಳಲ್ಲಿ 150 ರೂ. ದಾಖಲಿಸಿದ್ದ ಈರುಳ್ಳಿಯ ದರ ಶುಕ್ರವಾರ ಸುಮಾರು 70ರಿಂದ 80 ರೂ.ಗೆ ಇಳಿದಿವೆ.

ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಸಹಿತ ಎಲ್ಲಾ ಅಂಗಡಿಮುಂಟ್ಟುಗಳಲ್ಲೂ ಕೂಡಾ ಈರುಳ್ಳಿಯ ದರ ಏರುಗತಿಯಲ್ಲಿ ಸಾಗುತ್ತಿತ್ತು. ಈರುಳ್ಳಿ ಬಹುತೇಕರಿಗೆ ಅಗತ್ಯದ ಆಹಾರ ಸಾಮಗ್ರಿಯಾದರೂ ಕೂಡ ಬೆಲೆ ಏರಿಕೆಯಿಂದ ದೂರ ಸರಿದಿದ್ದರು. ಆದರೆ ಸೋಮವಾರದಿಂದ ನಿಧಾನವಾಗಿ ಈರುಳ್ಳಿಯ ದರದಲ್ಲಿ ಇಳಿಕೆಯಾಗಿದೆ. ಸೋಮವಾರ ಏಕಾಏಕಿ 50 ರೂ. ಇಳಿಕೆಯಾಗಿತ್ತು. ಆ ಬಳಿಕ ದಿನದಿಂದ ದಿನಕ್ಕೆ ತಲಾ 10 ರೂ.ನಂತೆ ಇಳಿಕೆಯಾಗಿದೆ. ಇದೀಗ 1 ಕೆಜಿ ಈರುಳ್ಳಿಗೆ 70ರಿಂದ 80 ರೂ.ದರವಿದೆ.

ನಗರದ ಸೆಂಟ್ರಲ್ ಮಾರ್ಕೆಟ್ ಈರುಳ್ಳಿ ವ್ಯಾಪಾರಿಯೊಬ್ಬರು ಹೇಳುವ ಪ್ರಕಾರ ಮಂಗಳೂರಿಗೆ ಈಗ ಮಹಾರಾಷ್ಟ್ರದಿಂದ ಈರುಳ್ಳಿ ಬರುತ್ತಿದೆ. ಹೊಸ ಈರುಳ್ಳಿಯ ಆಮದಿನೊಂದಿಗೆ ದರ ಇಳಿಕೆಯಾಗುತ್ತಿದೆ. ಮುಂದಿನ ಸೋಮವಾರದಿಂದ ಮತ್ತಷ್ಟು ದರ ಇಳಿಯುವ ಸೂಚನೆಯಿದೆ ಎಂದಿದ್ದಾರೆ.

ಟರ್ಕಿ, ಈಜಿಫ್ಟ್‌ನಿಂದ ಆಮದಿಲ್ಲ
ಕರಾವಳಿಯಲ್ಲಿ ಈರುಳ್ಳಿಯ ಅಭಾವ ಕಾಡುತ್ತಿದ್ದಂತೆ ಟರ್ಕಿ ಹಾಗೂ ಈಜಿಫ್ಟ್‌ನಿಂದ ಈರುಳ್ಳಿಯನ್ನು ಆಮದು ಮಾಡಲಾಗುತ್ತಿತ್ತು. ಆದರೆ ಈಗ ಈ ಎರಡು ದೇಶಗಳಿಂದ ತಂದ ಈರುಳ್ಳಿ ಖಾಲಿಯಾಗಿದೆ. ಅಲ್ಲದೆ ಮಹಾರಾಷ್ಟ್ರದಿಂದಲೂ ಈರುಳ್ಳಿ ಬರುವ ಕಾರಣ ವಿದೇಶಿ ಈರುಳ್ಳಿಯ ಆಮದು ನಿಂತಿದೆ ಎಂದು ಈರುಳ್ಳಿ ವ್ಯಾಪಾರಿಗಳು ತಿಳಿಸಿದ್ದಾರೆ.

ಮಂಗಳೂರು ಸೆಂಟ್ರಲ್ ಮಾರ್ಕೆಟ್‌ಗೆ ಗುರುವಾರ 30 ಟನ್ ಈರುಳ್ಳಿ ಬಂದಿತ್ತು. ಈ ಹಿಂದೆ ದರ ಇಳಿಕೆಯಾದಾಗ ಜಾಸ್ತಿ ಈರುಳ್ಳಿ ಬರ್ತಾ ಇತ್ತು. ಅದರ ಮಾರಾಟ ಕೂಡ ಸಾಕಷ್ಟು ಕುಸಿತ ಕಂಡ ಕಾರಣ ಅನಿವಾರ್ಯವಾಗಿ ಬೆಲೆಯಲ್ಲೂ ಇಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News