​ದ.ಕ.: ಮಸೀದಿಗಳಲ್ಲಿ ವಿಶೇಷ ಜಾಗೃತಿ-ಪ್ರಾರ್ಥನೆ

Update: 2019-12-19 06:18 GMT

ಮಂಗಳೂರು, ಡಿ.13: ಎನ್‌ಆರ್‌ಸಿ-ಸಿಎಬಿ ಕುರಿತು ದೇಶಾದ್ಯಂತ ನಡೆಯುವ ಆಕ್ರೋಶದ ಕಾವು ದ.ಕ.ಜಿಲ್ಲೆಯಲ್ಲೂ ಕಾಣಿಸಿಕೊಳ್ಳತೊಡಗಿದ್ದು, ಶುಕ್ರವಾರ ಜುಮಾ ನಮಾಝ್ ಬಳಿಕ ಕೆಲವು ಮಸೀದಿಗಳಲ್ಲಿ ವಿಶೇಷ ಜಾಗೃತಿ, ಪ್ರಾರ್ಥನೆ ನಡೆದಿದೆ.

ಸೂರಿಂಜೆಯ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಮುಂದೆ ಮುಸ್ಲಿಮರು ಪ್ರತಿಭಟನೆ ನಡೆಸಿ ಗಮನ ಸೆಳೆದರು. ಈ ಮಧ್ಯೆ ನಗರ ಮತ್ತು ಗ್ರಾಮಾಂತರ ಭಾಗದ ನೂರಾರು ಮಸೀದಿಗಳಲ್ಲಿ ಎನ್‌ಆರ್‌ಸಿ-ಸಿಎಬಿ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಂದೇಶಗಳನ್ನು ರವಾನಿಸುವಾಗ ಪರಾಮರ್ಶಿಸಬೇಕು. ಆ ಬಗ್ಗೆ ವಿನಾ ಕಾರಣ ಪ್ರತಿಕ್ರಿಯೆ ನೀಡದೆ ಸಂಯಮ ಕಾಪಾಡಬೇಕು. ದೇಶದ ಕಾನೂನನ್ನು ಯಾವ ಕಾರಣಕ್ಕೂ ಕೈಗೆತ್ತಿಕೊಳ್ಳಬಾರದು ಎಂದು ಮಸೀದಿಗಳ ಇಮಾಮರು ಕರೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದೊಂದು ಕರಾಳ ಕಾನೂನು ಆಗಿದೆ. ಇದರ ವಿರುದ್ಧ ರಾಷ್ಟ್ರವ್ಯಾಪಿ ನಡೆಸುವ ಹೋರಾಟದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಿದೆ. ಆದರೆ, ಯಾವ ಕಾರಣಕ್ಕೂ ಅಹಿತಕರ ಘಟನೆಗೆ ಆಸ್ಪದ ನೀಡಬಾರದು ಎಂದು ಇಮಾಮರು ಮನವಿ ಮಾಡಿಕೊಂಡಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆಯು ಕಾನೂನಾಗಿ ರೂಪುಗೊಂಡ ಬಳಿಕದ ಮೊದಲ ಜುಮಾ ನಮಾಝ್ ಆದ ಕಾರಣ ಬಹುತೇಕ ಮಸೀದಿಗಳ ಸುತ್ತಮುತ್ತ ಶುಕ್ರವಾರ ಪೊಲೀಸ್ ಬಂದೋಬಸ್ತ್ ಕಂಡು ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News