ಅಪ್ರಾಪ್ತೆಯ ಅತ್ಯಾಚಾರ: ಆರೋಪ ಸಾಬೀತು

Update: 2019-12-13 13:59 GMT

ಮಂಗಳೂರು, ಡಿ.13: ಅಪ್ರಾಪ್ತೆಯನ್ನು ನಿರಂತರ ಅತ್ಯಾಚಾರಗೈದ ಪ್ರಕರಣವು 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ ಶಿಕ್ಷೆಯ ಪ್ರಮಾಣವನ್ನು ಕಾದಿರಿಸಿ ಶುಕ್ರವಾರ ತೀರ್ಪು ನೀಡಿದೆ.

ಮೂಲತಃ ಉತ್ತರ ಭಾರತದ, ಪ್ರಸ್ತುತ ಬೋಳಾರ ಲೇಬರ್ ಕಾಲನಿಯ ನಿವಾಸಿ ಕಿಶೋರ್ ಭಯ್ಯ (36) ಈ ಪ್ರಕರಣದ ಅಪರಾಧಿಯಾಗಿದ್ದಾನೆ. ಆರೋಪಿಯ ವಿರುದ್ಧ ಐಪಿಸಿ 376 (ಅತ್ಯಾಚಾರ), 506 (ಕೊಲೆ ಬೆದರಿಕೆ), ಪೋಕ್ಸೋ ಕಾಯ್ದೆ 5 ಮತ್ತು 6 ಕಲಂ (ಲೈಂಗಿಕ ದೌರ್ಜನ್ಯ)ರಡಿ ಪ್ರಕರಣ ಸಾಬೀತುಪಡಿಸಿ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯ ನ್ಯಾಯಾಧೀಶೆ ಬಿ.ಆರ್. ಪಲ್ಲವಿ ತೀರ್ಪು ನೀಡಿದ್ದಾರೆ.

ಪ್ರಕರಣ ವಿವರ: 2016ರಲ್ಲಿ ಆರೋಪಿ ಕಿಶೋರ್ ಭಯ್ಯ ತನ್ನ ಹೆಂಡತಿ ಹೆರಿಗೆಗೆಂದು ಅಸ್ಪತ್ರೆಯಲ್ಲಿ ದಾಖಲಾದ ಸಂದರ್ಭ 13 ವರ್ಷ ಪ್ರಾಯದ ಅಪ್ರಾಪ್ತೆಯನ್ನು ಪುಸಲಾಯಿಸಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರವೆಸಗಿದ್ದ. ಆರೋಪಿಯ ಕೃತ್ಯಕ್ಕೆ ಬಾಲಕಿ ಹೆದರಿ ಸುಮ್ಮನಾಗಿದ್ದನ್ನು ಗಮನಿಸಿ ನಿರಂತರ ಆಕೆಯ ಮೇಲೆ ಅತ್ಯಾಚಾರ ಕೃತ್ಯವನ್ನು ಮುಂದುವರಿಸಿದ್ದ. ಇದರ ಪರಿಣಾಮ ಬಾಲಕಿ ಅಸೌಖ್ಯಕ್ಕೀಡಾಗಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಬಳಿಕ ಮನೆಯವರು ಲೇಡಿಗೋಶನ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಾಲಕಿ ಗರ್ಭಿಣಿ ಎಂದು ತಿಳಿದು ಬಂದಿತ್ತು. ಅಲ್ಲದೆ ಕೆಲವು ದಿನಗಳ ಬಳಿಕ ಹೆಣ್ಣು ಮಗುವಿಗೆ ಬಾಲಕಿ ಜನ್ಮ ನೀಡಿದ್ದಳು. ಆರೋಪಿಯ ವಿರುದ್ಧ ಬಾಲಕಿಯ ತಾಯಿ ನಗರದ ಮಹಿಳಾ ಠಾಣೆಗೆ ದೂರು ನೀಡಿದ್ದರು.

ಅದರಂತೆ ಇನ್‌ಸ್ಪೆಕ್ಟರ್ ಕಲಾವತಿ ಆರೋಪಿಯನ್ನು ಬಂಧಿಸಿ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ 12ನೇ ಸಾಕ್ಷಿದಾರರು ಮತ್ತು 24 ದಾಖಲೆಗಳನ್ನು ಪರಿಗಣಿಸಲಾಗಿತ್ತು. ಮಗುವನ್ನು ಡಿಎನ್‌ಎ ಪರೀಕ್ಷೆಗೊಳಪಡಿಸಿದಾಗ ಕಿಶೋರ್ ಭಯ್ಯ ಆರೋಪಿ ಎನ್ನುವುದು ಸಾಬೀತಾಗಿದೆ.
ಸರಕಾರದ ಪರವಾಗಿ ವಿಶೇಷ ಅಭಿಯೋಜಕ ಸಿ. ವೆಂಕಟರಮಣ ಸ್ವಾಮಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News