ಪಟ್ಲ ಶಾಲೆಯ ವಿದ್ಯಾರ್ಥಿಗಳ ಅಪೂರ್ವ ಸಾಧನೆ
ಉಡುಪಿ, ಡಿ.13: ಪಟ್ಲ ಯು.ಎಸ್.ನಾಯಕ್ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಪೈಂಟಿಂಗ್ ಮತ್ತು ವಿಜ್ಞಾನ ಕ್ಷೇತ್ರಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಭಾರತದ ಸರಕಾರದ ಪೆಟ್ರೋಲಿಯಂ ಮಂತ್ರಾಲಯದ ವತಿಯಿಂದ ನಡೆಯುವ ರಾಷ್ಟ್ರಮಟ್ಟದ ಪೈಂಟಿಂಗ್ ಸ್ಪರ್ಧೆಗೆ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಪೃಥ್ವಿ ಆಚಾರ್ಯ ಆಯ್ಕೆಯಾಗಿದ್ದಾನೆ. ಸ್ಪರ್ಧೆ ಡಿ.20ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ. ಈತ ಹಿರೇಬೆಟ್ಟು ಗ್ರಾಮದ ಸದಾಶಿವನಗರದ ಅರುಣ ಆಚಾರ್ಯ ಹಾಗೂ ಜ್ಯೋತಿ ಆಚಾರ್ಯ ಇವರ ಸುಪುತ್ರ.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ವಿಜ್ಞಾನ ಪರಿಷತ್ತುಗಳ ವತಿಯಿಂದ ‘ಜಲಸಂರಕ್ಷಣೆ ಹಾಗೂ ನಿರ್ವಹಣೆ’ ಸಂಬಂಧ ಅಧ್ಯಯನ ವರದಿ ಆಧಾರದ ಮೇಲೆ ನಡೆಯಲಿರುವ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆಗೆ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಪ್ರತೀಕ್ಷಾ ಆಯ್ಕೆಯಾಗಿದ್ದು, ಈ ಪರೀಕ್ಷೆಯು ಡಿ.28 ಮತ್ತು 29ರಂದು ಗದಗ ಜಿಲ್ಲೆಯಲ್ಲಿ ನಡೆಯಲಿದೆ. ಈಕೆ ಪಟ್ಲ ರವೀಂದ್ರ ಮೂಲ್ಯ ಹಾಗೂ ಜಯಂತಿ ಮೂಲ್ಯ ಇವರ ಸುಪುತ್ರಿ.