ಶಬರಿಮಲೆ ಪ್ರವೇಶ ವಿಷಯ ತುಂಬ ಭಾವನಾತ್ಮಕವಾಗಿದೆ: ಸುಪ್ರೀಂ ಕೋರ್ಟ್

Update: 2019-12-13 16:26 GMT

ಹೊಸದಿಲ್ಲಿ,ಡಿ.13: ಶಬರಿಮಲೆ ವಿಷಯವು ಅತ್ಯಂತ ಭಾವನಾತ್ಮಕವಾಗಿದೆ ಎಂದು ಶುಕ್ರವಾರ ಹೇಳಿದ ಸರ್ವೋಚ್ಚ ನ್ಯಾಯಾಲಯವು,ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸುರಕ್ಷಿತ ಪ್ರವೇಶಾವಕಾಶವನ್ನು ಕೋರಿದ್ದ ಇಬ್ಬರು ಮಹಿಳೆಯರ ಅರ್ಜಿಗಳಿಗೆ ಸಂಬಂಧಿಸಿದಂತೆ ಯಾವುದೇ ಆದೇಶವನ್ನು ಹೊರಡಿಸಲು ನಿರಾಕರಿಸಿತು.

ಹಿಂದಿನ ತೀರ್ಪನ್ನು ಪುನರ್‌ಪರಿಶೀಲಿಸಲು ಶೀಘ್ರವೇ ಏಳು ನ್ಯಾಯಾಧೀಶರ ಪೀಠವೊಂದನ್ನು ತಾನು ರಚಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ತಿಳಿಸಿದರು.

ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸಲು ಪ್ರಯತ್ನಿಸುವ ಮಹಿಳೆಯರಿಗೆ ಪೊಲೀಸ್ ರಕ್ಷಣೆಯನ್ನು ಒದಗಿಸಲು ಕೇರಳ ಸರಕಾರಕ್ಕೆ ನಿರ್ದೇಶ ನೀಡುವಂತೆ ಕೋರಿ ಬಿಂದು ಅಮ್ಮಿಣಿ ಮತ್ತು ರೆಹಾನಾ ಫಾತಿಮಾ ಅವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

ಪರಿಸ್ಥಿತಿಯು ಸ್ಫೋಟಕಗೊಳ್ಳ್ಳುವುದನ್ನು ತಾನು ಬಯಸುವುದಿಲ್ಲ ಎಂದು ಹೇಳಿದ ಮು.ನ್ಯಾ.ಬೊಬ್ಡೆ ನೇತೃತ್ವದ ಪೀಠವು,‘ ಶಬರಿಮಲೆ ದೇವಸ್ಥಾನದಲ್ಲಿ ಋತುಸ್ರಾವ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನಿಷೇಧ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಈಗ ನಿಮ್ಮ ಪರವಾಗಿ ಆದೇಶವನ್ನು ಹೊರಡಿಸದಿರುವುದು ಸೂಕ್ತ ಸಮತೋಲನವನ್ನು ಕಾಯ್ದುಕೊಳ್ಳಲು ಅಗತ್ಯವಾಗಿದೆ. ವಿಷಯವನ್ನು ವಿಸ್ತ್ರತ ಪೀಠಕ್ಕೆ ಪ್ರಸ್ತಾಪಿಸಲಾಗಿದೆ ಮತ್ತು ಅದು ಅಂತಿಮವಾಗಿ ನಿಮ್ಮ ಪರವಾಗಿ ತೀರ್ಮಾನವನ್ನು ಕೈಗೊಂಡರೆ ನಾವು ನಿಮಗೆ ರಕ್ಷಣೆಯನ್ನು ಒದಗಿಸುತ್ತೇವೆ. ಸದ್ಯಕ್ಕೆ ಪರಿಸ್ಥಿತಿಯು ಸ್ಫೋಟಕವಾಗಿದೆ. ಯಾವುದೇ ಹಿಂಸಾಚಾರ ನಡೆಯುವುದನ್ನು ನಾವು ಬಯಸಿಲ್ಲ ’ಎಂದು ಅರ್ಜಿದಾರಿಗೆ ತಿಳಿಸಿತು. ‘

ಮಹಿಳೆಯರು ದೇವಸ್ಥಾನ ಪ್ರವೇಶಿಸುವುದನ್ನು ನ್ಯಾಯಾಲಯವು ನಿಷೇಧಿಸಿಲ್ಲ,ಆದರೆ ಅದು ಯಾವುದೇ ಆದೇಶವನ್ನು ಹೊರಡಿಸಲೂ ಬಯಸುತ್ತಿಲ್ಲ. ಅರ್ಜಿದಾರರು ದೇವಸ್ಥಾನವನ್ನು ಪ್ರವೇಶಿಸುವುದಾದರೆ ನಮಗೇನೂ ಸಮಸ್ಯೆಯಿಲ್ಲ ’ಎಂದು ಹೇಳಿದ ಮು.ನ್ಯಾ.ಬೊಬ್ಡೆ ಅವರು,ಎಲ್ಲ ವಯೋಮಾನದ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಾವಕಾಶ ಕಲ್ಪಿಸಿರುವ 2018ರ ತೀರ್ಪಿಗೆ ಯಾವುದೇ ತಡೆಯಾಜ್ಞೆಯನ್ನು ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಂದು ಅಮ್ಮಿಣಿಯವರಿಗೆ ನೀಡಲಾಗಿರುವ ಪೊಲೀಸ್ ರಕ್ಷಣೆ ಎಂದಿನಂತೆ ಮುಂದುವರಿಯುತ್ತದೆ ಎಂದೂ ಪೀಠವು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News