ಬಾಲ್ಯ ವಿವಾಹದಲ್ಲಿ ಭಾಗವಹಿಸಿದ ಎಲ್ಲರೂ ಶಿಕ್ಷಾರ್ಹರು: ಉಡುಪಿ ಜಿಲ್ಲಾಧಿಕಾರಿ ಜಗದೀಶ್

Update: 2019-12-13 16:40 GMT

ಉಡುಪಿ, ಡಿ.13: ಎಲ್ಲೇ ಆದರೂ ಬಾಲ್ಯ ವಿವಾಹ ನಡೆದಲ್ಲಿ, ಪೋಷಕರು ಸೇರಿದಂತೆ ವಿವಾಹ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮುದ್ರಿಸಿದವರಿಂದ ಮೊದಲುಗೊಂಡು ವಿವಾಹದಲ್ಲಿ ಊಟ ಮಾಡಿದವರು ಸೇರಿದಂತೆ ಪ್ರತಿಯೊಬ್ಬರು ಶಿಕ್ಷಾರ್ಹರು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಕಾಯಿದೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನ ಕುರಿತಂತೆ ಎಲ್ಲಾ ಶಾಲೆಗಳಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರು ಶಾಲೆಗೆ ದೀರ್ಘ ಗೈರುಹಾಜರಾದಲ್ಲಿ ಶಾಲೆಯ ಶಿಕ್ಷಕರು ಸ್ವತ: ವಿದ್ಯಾರ್ಥಿನಿಯ ಮನೆಗೆ ತೆರಳಿ ಪರಿಶೀಲಿಸುವಂತೆ ಸೂಚಿಸಿದ ಡಿಸಿ, ಈ ಕುರಿತಂತೆ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸುವಂತೆ ಡಿಡಿಪಿಐಗೆ ಸೂಚಿಸಿದರು.

ಎಲ್ಲಾ ಶಾಲೆಗಳಲ್ಲಿ ಬಾಲ್ಯ ವಿವಾಹ ನಿಷೇಧ ಮತ್ತು ಇದಕ್ಕೆ ಇರುವ ಶಿಕ್ಷೆಯ ಬಗ್ಗೆ ಶಾಲಾ ಶಿಕ್ಷಕರ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಶಾಲೆಗಳಲ್ಲಿ ಈ ಬಗ್ಗೆ ಭಿತ್ತಿಪತ್ರ ಮತ್ತು ಕರಪತ್ರಗಳ ಮೂಲಕ ಅರಿವು ಮೂಡಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಈ ವರ್ಷ ಬಾಲ್ಯ ವಿವಾಹ ನಡೆದ ಬಗ್ಗೆ ವರದಿ ಇಲ್ಲವಾಗಿದ್ದು, ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರಲ್ಲಿ ಬಾಲ್ಯ ವಿವಾಹಗಳು ನಡೆಯುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಬಗ್ಗೆ ವಿಶೇಷ ನಿಗಾವಹಿಸು ವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಬಾಲ್ಯ ವಿವಾಹ ಕಾಯ್ದೆ ಮತ್ತು ನಿಯಮಾವಳಿಗಳ ಅನುಷ್ಠಾನ ಕುರಿತಂತೆ, ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ಕಾರ್ಯಗಾರ ನಡೆಸಲಾಗಿದ್ದು, 90 ಸಾರ್ವಜನಿಕ ಸ್ಥಳಗಳಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಗೋಡೆ ಬರಹ ಬರೆಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ, ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶೋಭಾ ಜಿ.ಪುತ್ರನ್, ಜಿಪಂ ಉಪಕಾರ್ಯದರ್ಶಿ ಕಿರಣ್ ಪೆಡ್ನೇಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಬಾರ ಉಪನಿರ್ದೇಶಕಿ ವೀಣಾ ವಿವೇಕಾನಂದ, ಡಿವೈಎಸ್‌ಪಿ ಜೈಶಂಕರ್, ಡಿಡಿಪಿಐ ಶೇಷಶಯನ ಕಾರಿಂಜ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News