ಬಂಟ್ವಾಳ: ಮಕ್ಕಳ ವಿಜ್ಞಾನ ಹಬ್ಬಕ್ಕೆ ಚಾಲನೆ

Update: 2019-12-13 17:34 GMT

ಬಂಟ್ವಾಳ, ಡಿ.13: ವಿದ್ಯಾರ್ಥಿಗಳು ವಿಜ್ಞಾನವನ್ನು ಸಂತೋಷದಿಂದ ಅರಿತುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯ ಸರಕಾರ ಇದೇ ಮೊದಲ ಬಾರಿಗೆ ಮಕ್ಕಳ ವಿಜ್ಞಾನ ಹಬ್ಬ-2019ನ್ನು ಆಯೋಜಿಸಿದ್ದು, ಬಂಟ್ವಾಳ ತಾಲೂಕಿನ ಪೂಪಾಡಿ ಕ್ಲಸ್ಟರ್ ವ್ಯಾಪ್ತಿಯ ವಿದ್ಯಾರ್ಥಿಗಳಿಗಾಗಿ ಮಕ್ಕಳ ವಿಜ್ಞಾನ ಹಬ್ಬಕ್ಕೆ ಶುಕ್ರವಾರ ಸರಪಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಚಾಲನೆ ನೀಡಲಾಯಿತು.

ಸರಪಾಡಿ ಗ್ರಾಪಂ ಅಧ್ಯಕ್ಷೆ ಲೀಲಾವತಿ ಧರ್ಣಪ್ಪ ಅವರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳು ಹಾಗೂ ಅತಿಥಿಗಳು ಬಲೂನು ಹಾರಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು.

ಸರಪಾಡಿ ಗ್ರಾಪಂ ಸದಸ್ಯ ಧನಂಜಯ ಶೆಟ್ಟಿ ನಾಡಬೆಟ್ಟು ಮಾತನಾಡಿ, ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೆ ಬೆಂಬಲ ಸೂಚಿಸುವ ಉದ್ದೇಶದಿಂದ ಸರಕಾರ ಇಂತಹ ಸೃಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದಕ್ಕೆ ಎಲ್ಲರೂ ಬೆಂಬಲ ಸೂಚಿಸಬೇಕು ಎಂದು ಗ್ರಾಮೀಣ ಭಾಗವಾದ ಸರಪಾಡಿ ಶಾಲೆಯಲ್ಲಿ ಈ ಹಬ್ಬವನ್ನು ಆಯೋಜಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಶಿಕ್ಷಣ ಸಂಯೋಜಕಿ ಸುಶೀಲ ಅವರು ಮಾತನಾಡಿ, ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳನ್ನು ಕೇವಲ ಎರಡು ದಿನಗಳಿಗೆ ಸೀಮಿತಗೊಳಿಸದೆ, ಬಹಳ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಭವಿಷ್ಯದ ಜೀವನಕ್ಕೆ ಪೂರಕವಾಗಿಸಿಕೊಳ್ಳಬೇಕು. ಇಂತಹ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿರುವ ಪೂಪಾಡಿ ಕ್ಲಸ್ಟರ್‌ನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯೆ ಪ್ರೇಮಾ ಮಠದಬೆಟ್ಟು, ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಪೂಜಾರಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುಕುಮಾರ್, ಆಶಾ ಕಾರ್ಯಕರ್ತೆ ತೇಜಾವತಿ, ದಿನೇಶ್ ಗೌಡ ನೀರೊಲ್ಬೆ, ಅಜಿಲಮೊಗರು ಗುರು ಫ್ರೆಂಡ್ಸ್ ಅಧ್ಯಕ್ಷ ನವೀನ್ ಅಂಚನ್, ಶಿಕ್ಷಕ ಅಖಿಲ್ ಶೆಟ್ಟಿ ಕುರ್ಯಾಳ, ವಿವಿಧ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು.

ಉದ್ಘಾಟನೆಗೆ ಪೂರ್ವಭಾವಿಯಾಗಿ ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು.

ಸರಪಾಡಿ ಶಾಲಾ ಮುಖ್ಯಶಿಕ್ಷಕ ಗಣೇಶ್‌ಕುಮಾರ್ ಸ್ವಾಗತಿಸಿದರು. ಪೂಪಾಡಿ ಕ್ಲಸ್ಟರ್‌ನ ಸಿಆರ್‌ಪಿ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. 

ಕ್ಲಸ್ಟರ್ ವ್ಯಾಪ್ತಿಯ 8 ಶಾಲೆಗಳ 6ರಿಂದ 8ನೇ ತರಗತಿಯ 150 ವಿದ್ಯಾರ್ಥಿಗಳು ವಿಜ್ಞಾನ ಹಬ್ಬದಲ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News