ಬೆಳ್ತಂಗಡಿ: ಶಾಲೆಯ ಬಾವಿಗೆ ವಿಷಪ್ರಾಶನ ಮಾಡಿದ ಆರೋಪಿಗಳ ಪತ್ತೆಗೆ ಆಗ್ರಹಿಸಿ ಧರಣಿ

Update: 2019-12-13 17:52 GMT

ಬೆಳ್ತಂಗಡಿ: ಶಿಬಾಜೆ ಗ್ರಾಮದ ಪೆರ್ಲ ಸರಕಾರಿ ಉ.ಹಿ.ಪ್ರಾ.ಶಾಲೆಯ ಕುಡಿಯುವ ನೀರಿನ ಬಾವಿಗೆ ವಿಷಪ್ರಾಶನ ಮಾಡಿರುವ ಪ್ರಕರಣದ ಆರೋಪಿಗಳ ಶೀಘ್ರ ಪತ್ತೆಗೆ ಆಗ್ರಹಿಸಿ ಶಾಲೆಯ ವಿದ್ಯಾರ್ಥಿಗಳ ಪೋಷಕರು ಮತ್ತು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ಬೆಳಗ್ಗೆ ಹತ್ತೂವರೆ ಗಂಟೆಗೆ ಆರಂಭವಾದ ಪ್ರತಿಭಟನೆ ಸ್ಥಳಕ್ಕೆ ಅಪರಾಹ್ನದ 2-30ರ ವೇಳೆಗೆ ಆಗಮಿಸಿದ ಬೆಳ್ತಂಗಡಿ ಉಪತಹಶೀಲ್ದಾರ್ ಪ್ರತೀಷ್ ಕುಮಾರ್ ಹಾಗೂ ವೃತ್ತ ನಿರೀಕ್ಷಕ  ಸಂದೇಶ್ ರವರು ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಶೀಘ್ರವೇ ಆರೋಪಿಗಳ ಪತ್ತೆ ಹಚ್ಚುವುದಾಗಿ ನೀಡಿದ ಭರವಸೆಯ ಮೇರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. 

ಶಾಲಾ ವಿದ್ಯಾರ್ಥಿಗಳು, ಹಾಗೂ ಪೋಷಕರು ಶಿಬಾಜೆ ಪೇಟೆಯಿಂದ ಶಾಲೆಯ ಮುಂಭಾಗದ ತನಕ ಮೆರವಣಿಗೆಯಲ್ಲಿ ಸಾಗಿ ಬಂದು ಆರೋಪಿಗಳ ಪತ್ತೆಗೆ ಆಗ್ರಹಿಸಿದರು. ಪ್ರಕರಣ ನಡೆದು 12 ದಿನ ಕಳೆದರೂ ಆರೋಪಿಗಳ ಪತ್ತೆಯಾಗದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಪೊಲೀಸ್, ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರವೂ ಕೂಗಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಿಬಾಜೆ ಗ್ರಾ.ಪಂ.ಮಾಜಿ ಅಧ್ಯಕ್ಷ ಎ.ಸಿ.ಮ್ಯಾಥ್ಯು, ಶಾಲೆ ಊರಿನ ದೇವಾಲಯವಿದ್ದಂತೆ. ಶಾಲೆಯಲ್ಲಿನ ಕುಡಿಯುವ ನೀರಿನ ಬಾವಿಗೆ ವಿಷಪ್ರಾಶನ ಮಾಡುವ ಮೂಲಕ ಮಕ್ಕಳ ಸಾಮೂಹಿಕ ಹತ್ಯೆಗೆ ದುಷ್ಕರ್ಮಿಗಳು ಮುಂದಾಗಿದ್ದಾರೆ. ಇಲ್ಲಿ ಘಟನೆ ನಡೆದು 12 ದಿನ ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ಪ್ರಕರಣವನ್ನು ಪೊಲೀಸ್ ಇಲಾಖೆ ನಿರ್ಲಕ್ಷ್ಯ ಮಾಡಿದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಶಿಬಾಜೆ ಗ್ರಾ.ಪಂ.ನಲ್ಲಿನ ಸದಸ್ಯರೊಳಗಿನ ವೈಷಮ್ಯ ಶಾಲೆಯ ಬಾವಿಗೆ ವಿಷಪ್ರಾಶನ ಹಾಕುವ ತನಕ ಬಂದಿದೆ ಎಂದು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ತಾ.ಪಂ.ಅಧ್ಯಕ್ಷೆ ದಿವ್ಯಜ್ಯೋತಿಯವರು ಮಾತನಾಡಿ, ಘಟನೆ ನಡೆದ ದಿನವೇ ಶಾಲೆಗೆ ಬಂದು ಪರಿಶೀಲನೆ ನಡೆಸಿದ್ದೇನೆ. ಶಾಲೆಯಲ್ಲಿ ಇಂತಹ ಘಟನೆ ನಡೆಯಬಾರದು. ಘಟನೆ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸಿ ಆರೋಪಿಗಳು ಯಾವುದೇ ಪಕ್ಷ, ಜಾತಿ, ಧರ್ಮಕ್ಕೆ ಸೇರಿದವರಾಗಿದ್ದರೂ ಶಿಕ್ಷಿಸುವ ಕೆಲಸ ಮಾಡಬೇಕೆಂದು ಹೇಳಿದರು.

ದ.ಕ.ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಕಲ್ಲುಗುಡ್ಡೆ ಗುರುವಪ್ಪರವರು ಮಾತನಾಡಿ, ಶಾಲೆಯ ಬಾವಿಗೆ ವಿಷಪ್ರಾಶನ ಮಾಡಿರುವ ಆರೋಪಿಗಳ ಬಗ್ಗೆ ಎಸ್‍ಡಿಎಂಸಿ, ಶಿಕ್ಷಕರಿಗೆ ಮಾಹಿತಿ ಇದ್ದರೂ ಬಾಯಿ ಬಿಡುತ್ತಿಲ್ಲ. ಶಾಲಾ ಮಕ್ಕಳ ಜೀವದ ಮೇಲೆ ಆಟವಾಡುತ್ತಿರುವ ಯಾರೇ ಆಗಲಿ ಅವರನ್ನ ಇಲ್ಲಿನ ಸ್ಥಳ ದೇವತೆ ಕ್ಷಮಿಸುವುದಿಲ್ಲ ಎಂದರು. 

ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್‍ರವರು ಮಾತನಾಡಿ, ಆರೋಪಿಗಳು ಯಾರೇ ಆಗಿದ್ದರೂ ಅವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಅಧ್ಯಕ್ಷ ಶ್ರೀಧರ ರಾವ್, ಸ್ತ್ರೀ ಶಕ್ತಿ ಗೊಂಚಲು ಸಮಿತಿ ಅಧ್ಯಕ್ಷೆ ಶೋಭಾ ಅಭ್ಯಂಕರ್, ಅಸ್ವಸ್ಥಗೊಂಡ ಮಗುವಿನ ತಾಯಿ ರೇಣುಕಾವಿಶ್ವನಾಥ ಮಾತನಾಡಿ ಆರೋಪಿಗಳ ಶೀಘ್ರ ಪತ್ತೆ ಹಚ್ಚುವಂತೆ ಒತ್ತಾಯಿಸಿದರು. ಧರ್ಮಸ್ಥಳ ಪೊಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ಓಡಿಯಪ್ಪ ಗೌಡ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಕೈಗೊಂಡಿದ್ದರು.

ಎಸ್‍ಡಿಎಂಸಿ  ಗೈರು: ಇಂದು ನಡೆದ ಪ್ರತಿಭಟನೆಗೆ ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಪೋಷಕರ ಒಂದು ಗುಂಪು ಗೈರು ಹಾಜರಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಡಿಎಂಸಿ ಅಧ್ಯಕ್ಷ ವೆಂಕಪ್ಪ ಗೌಡರವರು, ಪ್ರಕರಣ ತನಿಖೆಯ ಹಂತದಲ್ಲಿದೆ. ಶಾಸಕರು ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ಆರೋಪಿಗಳ ಪತ್ತೆಗೆ ಒತ್ತಾಯಿಸಿದ್ದಾರೆ. ದ.10ರಂದು ನಡೆದ ಪೋಷಕರ ಸಭೆಯಲ್ಲಿ ಡಿ.11ರಿಂದ ಮಕ್ಕಳನ್ನು ಶಾಲೆಗೆ ಕಳುಹಿಸದೇ ಇರಲು ನಿರ್ಣಯಿಸಲಾಗಿದೆ. ಆದ್ದರಿಂದ ಇಂದಿನ ಪ್ರತಿಭಟನೆಗೆ ಹೋಗಿಲ್ಲ. ಆರೋಪಿಗಳ ಪತ್ತೆಗೆ ನಮ್ಮದೂ ಆಗ್ರಹವಿದೆ ಎಂದರು.

ತಹಶೀಲ್ದಾರ್ ಮತ್ತು ಪೋಲೀಸ್ ಇಲಾಖೆ ಸಭೆ ನಂತರ ಶಾಲೆಗೆ ಮಕ್ಕಳು: ಮಕ್ಕಳ ಪೋಷಕರು ಕಂದಾಯ ಇಲಾಖೆ ಮತ್ತು ಪೋಲೀಸ್ ವೃತ್ತ ನಿರೀಕ್ಷಕರು ಸಭೆ ನಡೆಸಿ ಶಾಲಾ ಮಕ್ಕಳಲ್ಲಿ ಧೈರ್ಯ ತುಂಬಿಸುವ ಕಾರ್ಯವನ್ನು ನಡೆಸಿದ ನಂತರ ಶಾಲೆಗೆ ಮಕ್ಕಳನ್ನು ಕಳುಹಿಸುವುದಾಗಿ ಪೋಷಕರು ಒಪ್ಪಿಕೊಂಡರು. 

ಕುಡಿಯುವ ನೀರಿನ ಟ್ಯಾಂಕಿಗೂ ವಿಷ ಬೆರಕೆ ಶಂಕೆ: ಸರಕಾರಿ ಉ.ಹಿ.ಪ್ರಾ.ಶಾಲೆಯ ಕುಡಿಯುವ ನೀರಿನ ಬಾವಿಗೆ ವಿಷಪ್ರಾಶನ ಮಾಡಿರುವ ಪ್ರಕರಣದ ಬೆನ್ನಲ್ಲೇ ಶಿಬಾಜೆ ಗ್ರಾಮ ಪಂಚಾಯತ್‍ನ ಪೆರ್ಲ ಸಮೀಪದ ಬಟ್ಟಾಜೆ ಎಂಬಲ್ಲಿ ಕಪಿಲಾ ನದಿಯ ದಡದಲ್ಲಿ ಇರುವ ಕುಡಿಯುವ ನೀರಿನ ಟ್ಯಾಂಕ್‍ಗೆ ಸಹ ವಿಷ ಬೆರೆಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ದ.13ರಂದು ಬೆಳಿಗ್ಗೆ ಟ್ಯಾಂಕ್‍ನಿಂದ ಪೂರೈಕೆಯಾದ ನೀರು ದುರ್ವಾಸನೆಯಿಂದ ಕೂಡಿರುವ ಬಗ್ಗೆ ನೀರು ನಿರ್ವಾಹಕರಿಗೆ ಮಾಹಿತಿ ಬಂದಿದ್ದು ಅವರು ಟ್ಯಾಂಕ್‍ನ ನೀರನ್ನು ಪರಿಶೀಲಿಸಿದಾಗ ಅದರೊಳಗೆ ಮೀನುಗಳು ಸತ್ತುಬಿದ್ದಿರುವುದು ಕಂಡು ಬಂದಿದೆ. ಅಲ್ಲದೇ ಟ್ಯಾಂಕ್‍ನ ನೀರು ಬಣ್ಣ ಕಳೆದುಕೊಂಡಿರುವುದು ಕಂಡು ಬಂದಿದೆ. ಇದು ಈ ಭಾಗದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವೃತ್ತ ನಿರೀಕ್ಷಕ ಸಂದೇಶ್ , ಧರ್ಮಸ್ಥಳ ಠಾಣಾ ಎಸ್‍ಐ ಓಡಿಯಪ್ಪ ಗೌಡರವರು  ಶಿಬಾಜೆ ಗ್ರಾ.ಪಂ. ಅಧ್ಯಕ್ಷೆ ಸುಶೀಲ, ಸದಸ್ಯ ರಮೇಶ್ ಗೌಡ ಕುರುಂಜ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News