ಕಟೀಲು ದುರ್ಗಾ ಪರಮೇಶ್ವರಿ ಯಕ್ಷಗಾನ ಮೇಳ ಹರಾಜು: ದೇವಸ್ಥಾನದ ಮುಕ್ತೇಸರರಿಂದ ತೀವ್ರ ಆಕ್ಷೇಪ

Update: 2019-12-13 18:22 GMT

ಬೆಂಗಳೂರು, ಡಿ.13: ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳಗಳಿಗೆ ಸಂಬಂಧಿಸಿದ ದೂರುಗಳನ್ನು ಆಧರಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯು ರಾಜ್ಯ ಮುಜರಾಯಿ ಇಲಾಖೆ ಆಯುಕ್ತರಿಗೆ ನೀಡಿರುವ ವರದಿ ಬಗ್ಗೆ ವ್ಯಾಜ್ಯದಲ್ಲಿ ಅರ್ಜಿದಾರರೂ ಆಗಿರುವ ದೇವಸ್ಥಾನದ ಪಾರಂಪರಿಕ ಮುಕ್ತೇಸರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಗಳ ವರದಿ ಆಧರಿಸಿ ರಾಜ್ಯ ಮುಜರಾಯಿ ಇಲಾಖೆ ಆಯುಕ್ತರು ಯಕ್ಷಗಾನ ಮೇಳದ ಹರಾಜು ಪ್ರಕ್ರಿಯೆಗೆ ಆದೇಶಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ರಿಟ್ ಅರ್ಜಿ ವಿಚಾರಣೆಯನ್ನು ನ್ಯಾ. ಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರವೂ ಮುಂದುವರಿಸಿತು. ಈ ವೇಳೆ ಅರ್ಜಿದಾರರೂ ಆಗಿರುವ ದೇವಸ್ಥಾನದ ಪಾರಂಪರಿಕ ಮುಕ್ತೇಸರರ ಪರ ಹಿರಿಯ ವಕೀಲ ಪಿ.ಎಸ್. ರಾಜಗೋಪಾಲ ಅವರು ವಾದ ಮಂಡಿಸಿ, ಸಂಬಂಧಪಡದವರು ಕೊಟ್ಟ ದೂರನ್ನು ಆಧರಿಸಿ ಜಿಲ್ಲಾಧಿಕಾರಿ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ವಿಚಾರಣೆ ನಡೆಸಿ ಮುಜರಾಯಿ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ. ವರದಿಯು ಅನೇಕ ದೋಷಗಳಿಂದ ಕೂಡಿದೆ. ಎಲ್ಲದಕ್ಕೂ ಮುಖ್ಯವಾಗಿ ಈ ವರದಿ ಸಂಶಯಾಸ್ಪದ, ದುರುದ್ದೇಶಪೂರ್ವಕ ಹಾಗೂ ಪೂರ್ವಗ್ರಹ ಪೀಡಿತ ಭಾವನೆಗಳಿಂದ ಕೂಡಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ದೇವಾಲಯದ ಸಂಪ್ರದಾಯಕ್ಕೆ ಅನುಗುಣವಾಗಿ ಶತಮಾನಗಳಿಂದ ಯೋಗ್ಯರು ಮೇಳಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ, ಯಾರೋ ಭ್ರಷ್ಟರು ನೀಡಿದ ದೂರಿನ ಅನುಸಾರ, ದೇವಾಲಯಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಗಳು ಮಾಡಿದ ಆಪಾದನೆಗಳನ್ನು ಜಿಲ್ಲಾಧಿಕಾರಿ ಪರಿಗಣಿಸಿದ್ದಾರೆ. ಹಾಗಾಗಿ ಅವರು ನೀಡಿರುವ ವರದಿ ದೇವಾಲಯದ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯುಂಟು ಮಾಡಿದೆ’ ಎಂದರು.

ಸಕ್ಷಮ ಪ್ರಾಧಿಕಾರದ ಹೆಸರಿನಲ್ಲಿ ವರದಿ ನೀಡಿರುವ ಜಿಲ್ಲಾಧಿಕಾರಿಗೆ ಅರ್ಜಿದಾರರು ವಿವರವಾದ ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೆ ಅದನ್ನು ಕಡೆಗಣಿಸಲಾಗಿದೆ. ವರದಿಯಲ್ಲಿನ ಅಂಶಗಳೆಲ್ಲಾ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತಹ ವಿಷಯಗಳು. ಮುಜರಾಯಿ ಇಲಾಖೆ ಸಕ್ಷಮ ಪ್ರಾಧಿಕಾರವೇ ಅಲ್ಲ’ ಎಂದು ಪ್ರತಿಪಾದಿಸಿದರು.

ಇದೇ ವೇಳೆ ಪ್ರಕರಣದಲ್ಲಿ ಮಧ್ಯಂತರ ಅರ್ಜಿದಾರರಾದ ಭಾಗವತ ಸತೀಶ್ ಶೆಟ್ಟಿ ಪಟ್ಲ ಪರ ವಕೀಲ ಡಿ.ಆರ್. ರವಿಶಂಕರ್‌ ವಾದ ಮಂಡಿಸಿ, ಯಕ್ಷಗಾನ ಮೇಳಗಳನ್ನು ಹರಾಜು ಮೂಲಕ ಆಯೋಜಿಸಬೇಕು ಎಂದು ರಾಜ್ಯ ಸರಕಾರ 2012ರಲ್ಲಿಯೇ ಹೇಳಿದೆ. ಆದರೆ, ಈ ನಿಯಮ ಕೇವಲ ಒಂದು ದೇವಸ್ಥಾನದಲ್ಲಿ ಮಾತ್ರ ಜಾರಿಗೆ ಬಂದಿದೆ. ಇನ್ನುಳಿದ ದೇವಾಲಯಗಳಲ್ಲಿ ಅಳವಡಿಕೆ ಆಗಿಲ್ಲ. ಯಕ್ಷಗಾನ ಮೇಳಗಳು ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಹುತೇಕ ಹಿಂದೂ ದೇವಾಲಯಗಳಲ್ಲಿ ನಡೆಯುತ್ತದೆ. ಈ ಮೇಳಗಳನ್ನು ದೇವಾಲಯದ ಟ್ರಸ್ಟಿಗಳು ನಡೆಸಬೇಕೊ ಅಥವಾ ಹರಾಜು ಪ್ರಕ್ರಿಯೆ ಮೂಲ ನಡೆಸಬೇಕೊ ಎಂಬುದಕ್ಕೆ ಸಂಬಂಧಿಸಿದಂತೆ 2011ರಲ್ಲಿ ಕಾನೂನಿಗೆ ತಿದ್ದುಪಡಿ ತರಲಾಗಿದೆ’ ಎಂದು ವಿವರಿಸಿದರು. ವಿಚಾರಣೆ ಅಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ಡಿ.16ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News