ರೊಹಿಂಗ್ಯಾ ಹತ್ಯಾಕಾಂಡದ ವೇಳೆ ಸೂ ಕಿ ಮೌನ

Update: 2019-12-14 14:10 GMT

ದ ಹೇಗ್ (ನೆದರ್‌ಲ್ಯಾಂಡ್ಸ್), ಡಿ. 14: ರೊಹಿಂಗ್ಯಾ ಮುಸ್ಲಿಮರ ಸಂಕಷ್ಟದ ಬಗ್ಗೆ ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿ ಮೌನ ವಾಗಿರುವುದಕ್ಕೆ ಗ್ಯಾಂಬಿಯ ದೇಶ ಗುರುವಾರ ಆಕ್ರೋಶ ವ್ಯಕ್ತಪಡಿಸಿದೆ.

ಇಲ್ಲಿನ ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯದಲ್ಲಿ ಜನಾಂಗೀಯ ಹತ್ಯೆ ಆರೋಪಗಳನ್ನು ಎದುರಿಸುತ್ತಿರುವ ತನ್ನ ದೇಶವನ್ನು ಸೂ ಕಿ ಸಮರ್ಥಿಸಿದ ಬಳಿಕ, ದೂರುದಾರ ದೇಶ ಗ್ಯಾಂಬಿಯ ತನ್ನ ವಾದ ಮಂಡಿಸಿದೆ.

ಮ್ಯಾನ್ಮಾರ್ ಸೇನೆಯು 2017ರಲ್ಲಿ ನಡೆಸಿದ ಕಾರ್ಯಾಚರಣೆಯು ಬಂಡುಕೋರರನ್ನು ಗುರಿಯಾಗಿಸಿ ನಡೆದ ‘ನಿವಾರಣಾ ಕಾರ್ಯಾಚರಣೆಯಾಗಿತ್ತು’ ಎಂಬುದಾಗಿ ಮ್ಯಾನ್ಮಾರ್ ವಾದಿಸಿದೆ. ಆದರೆ, ಅದು ಸಾಮೂಹಿಕ ಹತ್ಯೆ, ಅತ್ಯಾಚಾರ ಮತ್ತು ಬಲವಂತದ ಗಡಿಪಾರುವಿಗೆ ಸಂಬಂಧಿಸಿದ ವ್ಯಾಪಕ ಆರೋಪಗಳನ್ನು ನಿರ್ಲಕ್ಷಿಸಿದೆ ಎಂದು ಆಫ್ರಿಕದ ದೇಶ ಗ್ಯಾಂಬಿಯ ಪರ ವಕೀಲರು ಆರೋಪಿಸಿದರು.

‘‘ಮೇಡಮ್ ಏಜಂಟ್, ನಿಮ್ಮ ಮೌನ ವು ನಿಮ್ಮ ಮಾತುಗಳಿಗಿಂತ ತುಂಬಾ ಹೆಚ್ಚಿನದನ್ನು ಹೇಳಿದೆ’’ ಎಂದು ಗ್ಯಾಂಬಿಯದ ವಕೀಲ ಫಿಲಿಪ್ಸ್ ಸ್ಯಾಂಡ್ಸ್ ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ ಸೂ ಕಿಯನ್ನು ಉದ್ದೇಶಿಸಿ ಹೇಳಿದರು. ಈ ಪ್ರಕರಣದಲ್ಲಿ ಸೂ ಕಿ ಅಧಿಕೃತವಾಗಿ ಮ್ಯಾನ್ಮಾರ್‌ನ ಏಜಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.

‘‘ಏಜಂಟ್‌ನ ತುಟಿಗಳಿಂದ ‘ಅತ್ಯಾಚಾರ’ ಎನ್ನುವ ಪದವು ಒಮ್ಮೆಯೂ ಹೊರಬಂದಿಲ್ಲ’’ ಎಂದು ಸ್ಯಾಂಡ್ಸ್ ಹೇಳಿದರು. ಈ ಸಂದರ್ಭದಲ್ಲಿ ಸೂ ಕಿ ಸಾಂಪ್ರದಾಯಿಕ ಬರ್ಮ ಉಡುಗೆಯನ್ನು ತೊಟ್ಟು ತಲೆಯಲ್ಲಿ ಹೂವಿಟ್ಟುಕೊಂಡು ಯಾವುದೇ ಭಾವನೆಯನ್ನು ತೋರ್ಪಡಿಸದೆ ನ್ಯಾಯಾಲಯದ ಕೋಣೆಯಲ್ಲಿ ಕುಳಿತಿದ್ದರು.

ಮ್ಯಾನ್ಮಾರ್ 1948ರ ವಿಶ್ವಸಂಸ್ಥೆಯ ಜನಾಂಗೀಯ ಹತ್ಯೆ ಒಡಂಬಡಿಕೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಮುಸ್ಲಿಮ್ ಪ್ರಾಬಲ್ಯದ ಪಶ್ಚಿಮ ಆಫ್ರಿಕದ ದೇಶ ಗ್ಯಾಂಬಿಯ ಮ್ಯಾನ್ಮಾರನ್ನು ವಿಶ್ವಸಂಸ್ಥೆಯ ನ್ಯಾಯಾಲಯಕ್ಕೆ ಎಳೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News