ನೇಪಾಳ: ಬಾಂಬ್ ಸ್ಫೋಟ; ಪೊಲೀಸ್ ಸೇರಿ 3 ಸಾವು

Update: 2019-12-14 15:10 GMT
ಸಾಂದರ್ಭಿಕ ಚಿತ್ರ

ಕಠ್ಮಂಡು (ನೇಪಾಳ), ಡಿ. 14: ದಕ್ಷಿಣ ನೇಪಾಳದಲ್ಲಿ ಶನಿವಾರ ಬೆಳಗ್ಗೆ ಬಾಂಬೊಂದು ಸ್ಫೋಟಿಸಿದಾಗ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಧನುಶಾ ಜಿಲ್ಲೆಯಲ್ಲಿರುವ ಮನೆಯೊಂದರ ಆವರಣದಲ್ಲಿ ಬಾಂಬ್ ಸ್ಫೋಟಗೊಂಡಿತು. ತನ್ನ ಮನೆಯ ಆವರಣದಲ್ಲಿ ಶಂಕಾಸ್ಪದ ವಸ್ತುವೊಂದನ್ನು ನೋಡಿದ ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬರುವಾಗ ಅದು ಸ್ಫೋಟಿಸಿತು.‘‘ನಮ್ಮ ತಂಡ ಸ್ಥಳಕ್ಕೆ ತಲುಪುತ್ತಿದ್ದಂತೆಯೇ ಬಾಂಬ್ ಸ್ಫೋಟಿಸಿತು. ಮನೆಯ ಮಾಲೀಕ, ಅವರ ಮಗ ಮತ್ತು ನಮ್ಮ ಪೊಲೀಸ್ ತಂಡದ ಓರ್ವ ಸದಸ್ಯ ಮೃತಪಟ್ಟರು’’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಕುಟುಂಬದ ಇತರ ಇಬ್ಬರು ಸದಸ್ಯರು ಮತ್ತು ಇನ್ನೋರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.ಉತ್ತರ ಕೊರಿಯದಿಂದ ಇನ್ನೊಂದು ‘ಮಹತ್ವದ ಪರೀಕ್ಷೆ’ ಸಿಯೋಲ್ (ದಕ್ಷಿಣ ಕೊರಿಯ), ಡಿ. 14: ಉತ್ತರ ಕೊರಿಯವು ತನ್ನ ಸೊಹಾಯ್ ಉಪಗ್ರಹ ಉಡಾವಕ ಸ್ಥಾವರದಲ್ಲಿ ಇನ್ನೊಂದು ‘ಮಹತ್ವದ ಪರೀಕ್ಷೆ’ ನಡೆಸಿದೆ ಎಂದು ಸರಕಾರಿ ಮಾಧ್ಯಮ ಶನಿವಾರ ವರದಿ ಮಾಡಿದೆ.

ಉತ್ತರ ಕೊರಿಯ ಮತ್ತು ಅಮೆರಿಕಗಳ ನಡುವಿನ ಪರಮಾಣು ಮಾತುಕತೆಯು ಸ್ಥಗಿತಗೊಂಡ ಬಳಿಕ, ಉತ್ತರ ಕೊರಿಯ ಹಲವು ಕ್ಷಿಪಣಿಗಳ ಪರೀಕ್ಷೆ ನಡೆಸಿದೆ.ಉತ್ತರ ಕೊರಿಯಕ್ಕೆ ಸಂಬಂಧಿಸಿದ ಅಮೆರಿಕದ ವಿಶೇಷ ರಾಯಭಾರಿ ಸ್ಟೀಫನ್ ಬೈಗನ್ ದಕ್ಷಿಣ ಕೊರಿಯಕ್ಕೆ ಮೂರು ದಿನಗಳ ಭೇಟಿಗಾಗಿ ಸಿಯೋಲ್‌ಗೆ ಆಗಮಿಸುವ ಒಂದು ದಿನದ ಮೊದಲು ಈ ಪ್ರಕಟನೆ ಹೊರಬಿದ್ದಿದೆ.

‘‘ಸೊಹಾಯ್ ಉಪಗ್ರಹ ಉಡಾವಕ ಸ್ಥಾವರದಲ್ಲಿ ಡಿಸೆಂಬರ್ 13ರ ರಾತ್ರಿ ಇನ್ನೊಂದು ಪ್ರಮುಖ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ’’ ಎಂದು ಉತ್ತರ ಕೊರಿಯದ ನ್ಯಾಶನಲ್ ಅಕಾಡೆಮಿ ಆಫ್ ಡಿಫೆನ್ಸ್ ಸಯನ್ಸ್‌ನ ವಕ್ತಾರರೊಬ್ಬರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News