ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಕಾಂಗ್ರೆಸ್‌ನಿಂದ ಮರವಂತೆ-ಬೈಂದೂರುವರೆಗೆ ಪಾದಯಾತ್ರೆ

Update: 2019-12-14 15:29 GMT

ಬೈಂದೂರು, ಡಿ.14: ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಹಾಗೂ ಅಗತ್ಯ ಇರುವ ಕಡೆ ಸರ್ವಿಸ್ ರಸ್ತೆ, ಯೂಟರ್ನ್, ಬಸ್‌ ನಿಲ್ದಾಣ ನಿರ್ಮಿಸಿದ ನಂತರವೇ ಟೋಲ್ ಸಂಗ್ರಹ ಮಾಡುವಂತೆ ಆಗ್ರಹಿಸಿ ಬೈಂದೂರು ಹಾಗೂ ವಂಡ್ಸೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನಾ ಪಾದಯಾತ್ರೆಯನ್ನು ಶನಿವಾರ ಮರವಂತೆಯಿಂದ ಬೈಂದೂರುವರೆಗೆ ಹಮ್ಮಿಕೊಳ್ಳಲಾಗಿತ್ತು.

ಪಾದಯಾತ್ರೆಗೆ ಮರವಂತೆ ಬಸ್ ನಿಲ್ದಾಣ ಬಳಿ ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಚಾಲನೆ ನೀಡಿದರು. ಅಲ್ಲಿಂದ ಆರಂಭಗೊಂಡ ಪಾದಯಾತ್ರೆಯು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುಮಾರು 18 ಕಿ.ಮೀ. ದೂರ ಸಾಗಿ ಬೈಂದೂರು ಹೊಸ ಬಸ್ ನಿಲ್ದಾಣದ ಬಳಿ ಸಮಾಪ್ತಿಗೊಂಡಿತು. ಪಾದಯಾತ್ರೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬಳಿಕ ಬೈಂದೂರಿನ ಹೊಸ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕುಂದಾಪುರದಿಂದ ಬೈಂದೂರುವರೆಗಿನ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಅವ್ಯವಸ್ಥೆ ಉಂಟಾಗಿದೆ. ಹೆದ್ದಾರಿ ಕಾಮಗಾರಿಯಿಂದ ಅಪಘಾತಗಳು ಹೆಚ್ಚಾಗಿ ಹಲವು ಮಂದಿ ಜೀವ ಕಳೆದುಕೊಂಡಿದ್ದಾರೆ. ಅರ್ಧ ಕಾಮಗಾರಿ ನಡೆಸಿ ಶಿರೂರಿನಲ್ಲಿ ಶುಲ್ಕ ಸಂಗ್ರಹಕ್ಕೆ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ರಾಷ್ಟ್ರೀಯ ಹೆದ್ದಾರಿ ವಿಚಾರದಲ್ಲಿ ಶಿವಮೊಗ್ಗ ಸಂಸದರು ಕೇವಲ ಹೇಳಿಕೆ ಗಳನ್ನು ಮಾತ್ರ ನೀಡುತ್ತಿದ್ದಾರೆ. ಆದರೆ ಈವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವೌನವಾಗಿವೆ. ಇದರಿಂದ ಐಆರ್‌ಬಿ ಕಂಪೆನಿ ಹಾಗೂ ಬಿಜೆಪಿಗೆ ಸಂಬಂಧ ಇರಬಹುದೆಂಬ ಸಂಶಯ ಕಾಡುತ್ತದೆ. ಇವರೆಲ್ಲಾ ಆರ್‌ಬಿಐ ಕಂಪೆನಿ ಜೊತೆ ಶಾಮೀಲಾಗಿದ್ದಾರೆ ಎಂದು ಅವರು ದೂರಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಮದನ್‌ಕುಮಾರ್, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಕುಮಾರ ಶೆಟ್ಟಿ, ತಾಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಮುಖಂಡರಾದ ವಾಸುದೇವ ಯಡಿಯಾಳ, ಶೇಖರ ಪೂಜಾರಿ, ಮಂಜುಳ, ರಾಜು ದೇವಾಡಿಗ, ಜಗದೀಶ್ ದೇವಾಡಿಗ, ಜ್ಯೋತಿ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ಬೇಡಿಕೆಗಳ ಮನವಿ ಸಲ್ಲಿಕೆ
ತಲ್ಲೂರಿನಲ್ಲಿ ಅಂಡರ್‌ಪಾಸ್ ಹಾಗೂ ಬಸ್ ತಂಗುದಾಣ, ಹೆಮ್ಮಾಡಿ ಜಂಕ್ಷನ್, ಮುಳ್ಳಿಕಟ್ಟೆ ಜಂಕ್ಷನ್, ತ್ರಾಸಿ, ಮರವಂತೆ ವರಹಾಸ್ವಾಮಿ ದೇವಳದ ಬಳಿ, ಜಕ್ಕನ್‌ಕಟ್ಟೆ, ನಾವುಂದ ಶುಭದಾ ಶಾಲೆ, ನಾಗೂರು, ಖಂಬದಕೋಣೆ, ನಾಯ್ಕನಕಟ್ಟೆ, ಉಪ್ಪುಂದಗಳಲ್ಲಿ ಅಗತ್ಯ ಇರುವ ಕಡೆ ಯುಟರ್ನ್, ಸರ್ವಿಸ್ ರಸ್ತೆ, ಚರಂಡಿ ಹಾಗೂ ತಂಗುದಾಣವನ್ನು ನಿರ್ಮಿಸಬೇಕು. ಯಡ್ತರೆ ಜಂಕ್ಷನ್ ಸರಿಪಡಿಸುವುದು ಹಾಗೂ ಬೈಂದೂರು ಹೊಸ ಬಸ್ ನಿಲ್ದಾಣದ ಬಳಿಯಲ್ಲಿರುವ ಯೂಟರ್ನ್ ಸರಿಪಡಿಸಬೇಕು. ಶಿರೂರು ಟೋಲ್‌ಗೇಟ್‌ನಿಂದ ಸ್ಥಳೀಯರಿಗೆ ವಿನಾಯಿತಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಬೈಂದೂರು ತಹಶೀಲ್ದಾರ್ ಬಸಪ್ಪಪೂಜಾರ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಚೆನ್ನಪ್ಪ, ಗುರಣ್ಣ, ಯೋಗೀಂದ್ರಪ್ಪ ಅವರಿಗೆ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News