ಉಪ್ಪುಂದ: ಮುಖ್ಯ ಶಿಕ್ಷಕಿಗೆ ಹಲ್ಲೆ, ಜೀವಬೆದರಿಕೆ; ಎಸ್‌ಡಿಎಂಸಿ ಅಧ್ಯಕ್ಷನ ವಜಾಕ್ಕೆ ಆದೇಶಿಸಿದ ಸಚಿವರು

Update: 2019-12-14 15:41 GMT
ಶಿಕ್ಷಣ ಸಚಿವ ಸುರೇಶ್ ಕುಮಾರ್

ಉಡುಪಿ, ಡಿ.14: ಉಪ್ಪುಂದ ಸರಕಾರಿ ಹಿರಿಯ ಉರ್ದು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಮಮತಾ ಎಂಬವರಿಗೆ ಕಿರುಕುಳ ನೀಡಿ ಜೀವಬೆದರಿಕೆ ಹಾಕಿದ್ದ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರನ್ನು ವಜಾಗೊಳಿಸಿ ಆದೇಶ ನೀಡಿರುವ ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಬೈಂದೂರು ತಾಲೂಕಿನ ಉಪ್ಪುಂದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿರುವ ಮಮತಾ ಅವರ ಮೇಲೆ ಅದೇ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮೋಹನಚಂದ್ರ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ತನಗೆ ಬಂದ ಮಾಹಿತಿಯ ಮೇಲೆ ತಕ್ಷಣ ಕ್ರಮಕೈಗೊಂಡ ಸುರೇಶ್ ಕುಮಾರ್, ಅವರನ್ನು ಎಸ್‌ಡಿಎಂಸಿ ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಈ ಕುರಿತು ಸಂಬಂಧಿತ ಶಿಕ್ಷಕಿಯೊಂದಿಗೆ ನೇರವಾಗಿ ಮಾತನಾಡಿ, ವಿವರಗಳನ್ನು ಕೇಳಿದ ಸಚಿವರು, ಆಕೆಗೆ ಸಾಂತ್ವನ ಹೇಳಿದರು. ನಂತರ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಹಾಗೂ ಸಂಬಂಧಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೊಂದಿಗೆ ಮಾತನಾಡಿ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಸ್ಪಷ್ಟ ಸೂಚನೆ ನೀಡಿದರು.

ಈ ಬಗ್ಗೆ ಶುಕ್ರವಾರ ತಡರಾತ್ರಿ ತನ್ನ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಸಚಿವರು, ತಾವು ಸ್ಥಳೀಯ ಶಾಸಕರಿಗೂ (ಬಿ.ಎಂ.ಸುಕುಮಾರ್ ಶೆಟ್ಟಿ) ಈ ಬಗ್ಗೆ ತಿಳಿಸಿದ್ದು, ಇಂತಹ ಪ್ರಕರಣಗಳಲ್ಲಿ ತಾಳ್ಮೆ ರಹಿತರಾಗಿರುವಂತೆ ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ನೀಡಿರುವ ದೂರನ್ನು ಅವರು ಉಲ್ಲೇಖಿಸಿದ್ದಾರೆ.

ಶಾಲೆಯಲ್ಲಿ ಪದೇ ಪದೇ ಇಂಥ ಘಟನೆಗಳು ನಡೆಯುತ್ತಿದ್ದು, ಈ ಹಿಂದೆ ಇದೇ ಶಾಲೆಯ ಸಹಶಿಕ್ಷಕಿಯೊಬ್ಬರನ್ನು ಶಿಕ್ಷಕರ ಕೊಠಡಿಯಲ್ಲಿ ಬಂಧಿಸಿ, ಲೈಂಗಿಕ ಕಿರುಕುಳ ನೀಡಿ, ಜೀವ ಬೆದರಿಕೆ ಹಾಕಿದ ಇದೇ ವ್ಯಕ್ತಿ, ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡು ಮತ್ತೆ ಅದೇ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿಗೆ ಡಿ.10ರ ಸಂಜೆ 4ಗಂಟೆಗೆ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿದ್ದಾರೆ. ಇದರಿಂದ ಈ ಶಾಲೆಯಲ್ಲಿ ಯಾವುದೇ ಶಿಕ್ಷಕಿ ಕೆಲಸ ನಿರ್ವಹಿಸುವುದು ಕಷ್ಟಸಾದ್ಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿಷಯವನ್ನು ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಆರು ಸೆಕ್ಷನ್‌ಗಳ ದೂರು ದಾಖಲಿಸಿದ್ದು, ಈವರೆಗೂ ಆರೋಪಿಯನ್ನು ಬಂಧಿಸದಿರುವುದು ಖಂಡನೀಯ. ಈ ಬಗ್ಗೆ ವಿವಿಧ ಶಿಕ್ಷಕರ ಸಂಘಟನೆಗಳ ಸಹಕಾರದೊಂದಿಗೆ ಶನಿವಾರ ಅಪರಾಹ್ನ ಬೈಂದೂರು ತಹಶೀಲ್ದಾರ್ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಲು ನಿರ್ಧರಿಸಿದ್ದೇವೆ ಎಂದೂ ದೂರಿನಲ್ಲಿ ತಿಳಿಸಲಾಗಿತ್ತು.

‘ಪ್ರಕರಣದ ಕುರಿತ ದೂರು ನಿನ್ನೆ ರಾತ್ರಿ ವಾಟ್ಸಪ್ ಮೂಲಕ ನನಗೆ ತಲುಪಿತು. ತಕ್ಷಣ ನಾನು ಸಂಬಂಧಪಟ್ಟ ಶಿಕ್ಷಕಿಯ ಜೊತೆ ಮಾತನಾಡಿ ವಿವರಗಳನ್ನು ಪಡೆದು ಆಕೆಗೆ ಸಾಂತ್ವನ ಹೇಳಿ ಧೈರ್ಯವನ್ನು ತುಂಬಿದ್ದೇನೆ. ನಾವೆಲ್ಲರೂ ನಿಮ್ಮ ಜೊತೆಗೆ ಇದ್ದೇವೆ ಎಂದು ಹೇಳಿದ್ದೇನೆ.’ ಎಂದು ಸಚಿವ ಸುರೇಶ್‌ಕುಮಾರ್ ಬರೆದುಕೊಂಡಿದ್ದಾರೆ.

ಆ ಬಳಿಕ ಬೈಂದೂರು ಶಾಸಕರೊಂದಿಗೆ ಮಾತನಾಡಿ, ಎಸ್‌ಡಿಎಂಸಿ ಅಧ್ಯಕ್ಷನ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕುರಿತು ಮಾತನಾಡಿದೆ. ನಂತರ ಉಡುಪಿ ಎಸ್ಪಿಯವರೊಂದಿಗೆ ಮಾತನಾಡಿ ಆರೋಪಿ ವಿರುದ್ಧ ತಕ್ಷಣ ಕ್ರಮಕೈಗೊಳ್ಳಲು ಸೂಚಿಸಿದ್ದೇನೆ. ಎಸ್‌ಡಿಎಂಸಿ ಅಧ್ಯಕ್ಷರಿರುವುದು ಶಾಲೆಯ ಅಭಿವೃದ್ಧಿಗಾಗಿ, ಅವನತಿಗಾಗಿ ಅಲ್ಲ. ಇಂಥ ಪ್ರಸಂಗಗಳಲ್ಲಿ ತಾಳ್ಮೆ ರಹಿತ (ಝಿರೋ ಟಾಲರೆನ್ಸ್) ಇರಲೇಬೇಕು ಎಂದು ಅವರು ಎಫ್‌ಬಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News