ಸಾಹಿತ್ಯ ಅಧ್ಯಯನದಿಂದ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ: ವಿನೀತ್ ರಾವ್

Update: 2019-12-14 15:43 GMT

ಉಡುಪಿ, ಡಿ. 14: ಸಾಹಿತ್ಯ ಅಧ್ಯಯನದಿಂದ ವ್ಯಕ್ತಿಯ ವ್ಯಕ್ತಿತ್ವ ರೂಪು ಗೊಳ್ಳಲು ಸಾಧ್ಯವಾಗುತ್ತದೆ. ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಗೌರವ ನೀಡುವ ಪಾಠ ಶಾಲಾ ಕಾಲೇಜುಗಳಲ್ಲಿಯೇ ಹೇಳಿಕೊಡಬೇಕಾದ ಅಗತ್ಯ ಎದುರಾಗಿದೆ ಎಂದು ಉಡುಪಿ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ.ವಿನೀತ್ ರಾವ್ ಹೇಳಿದ್ದಾರೆ.

ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್, ಬೆಂಗಳೂರು ಸೆಲ್ಕೋ ಫೌಂಡೇಶನ್, ಉಡುಪಿ ಎಂಜಿಎಂ ಕಾಲೇಜು, ಗಾಂಧಿ ಅಧ್ಯಯನ ಕೇಂದ್ರ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಸಂಯುಕ್ತ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ನಡೆದ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ’ ಹಾಗೂ ‘ಬರಿಯ ಬಟ್ಟೆಯಲ್ಲ ಭಾರತದ ಬಾವುಟ’ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪ್ರಮಾಣ ಪತ್ರ ವಿತರಣಾ ಸಮಾರಂದಲ್ಲಿ ಅವರು ಮಾತನಾಡುತ್ತಿದ್ದರು.

ಮಹಿಳೆಯರು ತಮ್ಮ ಮಾನಕ್ಕೆ ಆಪತ್ತು ಎದುರಾದಾಗ ಧೈರ್ಯದಿಂದ ಮುನ್ನುಗ್ಗುವ ಮೂಲಕ ಆತ್ಮರಕ್ಷಣೆ ಮಾಡಿಕೊಳ್ಳಬೇಕು ಮತ್ತು ಇದು ಪ್ರತಿಯೊಬ್ಬನ ಜನ್ಮಸಿದ್ಧ ಹಕ್ಕು ಎಂಬುದಾಗಿ ಗಾಂಧಿ ಪ್ರತಿಪಾದಿಸಿದ್ದರು. ಇಂತಹ ಸ್ಪರ್ಧೆಗಳಿಂದ ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳ ಬಗ್ಗೆ ತಿಳಿದು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತೆ ಎಂದರು.

ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಜಿ.ವಿಜಯ ಮಾತನಾಡಿ, ಗಾಂಧಿ ವಿಚಾರಧಾರೆಯನ್ನು ಕೇವಲ ಓದಿಗೆ ಸೀಮಿತಗೊಳಿಸದೆ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡ ಬೇಕು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಹಿರಿಯ ಅಧಿಕಾರಿ ಪ್ರೇಮಚಂದ್ರ ಕೆ.ತಿಂಗಳಾಯ ವಹಿಸಿದ್ದರು. ಸೆಲ್ಕೋ ಫೌಂಡೇಶನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಗದೀಶ್, ಟ್ರಸ್ಟಿ ವಿಮಲಾ ಕಾಮತ್, ಸಲಹೆ ಗಾರ ಸೀತಾರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಭಾರತೀಯ ವಿಕಾಸ ಟ್ರಸ್ಟ್‌ನ ಮುಖ್ಯ ವ್ಯವಸ್ಥಾಪಕ ಮನೋಹರ್ ಕಟ್ಗೇರಿ ಸ್ವಾಗತಿಸಿದರು. ಸಂಯೋಜಕಿ ಎ.ಲಕ್ಷ್ಮೀಬಾಯಿ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಆಚಾರ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News