ಎಕ್ಕಾರು ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಗ್ರಾಮಸಭೆ

Update: 2019-12-14 15:48 GMT

ಬಜ್ಪೆ: ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ 2019-20 ನೇ ಸಾಲಿನ ಮಕ್ಕಳ ಗ್ರಾಮ ಸಭೆಯು ಬಡಗ ಎಕ್ಕಾರು ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಎಕ್ಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ ಎಕ್ಕಾರು ವಹಿಸಿದ್ದರು.

ಗ್ರಾಮ ಸಭೆಯಲ್ಲಿ ರಾಜ್ಯ ಹೆದ್ದಾರಿಯ ಆಗಲೀಕರಣದ ಬಗ್ಗೆ ಗಂಭೀರವಾದ ಪ್ರಶ್ನೆಯೊಂದನ್ನು ವಿದ್ಯಾರ್ಥಿಗಳು ಅಧಿಕಾರಿಗಳ ಬಳಿ ಕೇಳಿದ್ದಾರೆ. ಅಲ್ಲದೆ ನಮಗೆ ರಸ್ತೆಯ ಅಂಚಿನಲ್ಲಿ ನಡೆದುಕೊಂಡು ಹೋಗಲು ಆಗುತ್ತಿಲ್ಲ. ಇಲ್ಲಿನ ಶಾಲಾ ಬಳಿ ಯಾವುದೇ ಹಂಪ್ಸ್ ಗಳನ್ನು ಆಳವಡಿಸಿಲ್ಲ. ಈ ಬಗ್ಗೆ ಹಿಂದೆ ನಡೆದ ಮಕ್ಕಳ ಗ್ರಾಮ ಸಭೆ ಹಾಗೂ ಹಿರಿಯರ ಗ್ರಾಮ ಸಭೆಗಳಲ್ಲೂ ಪ್ರಸ್ತಾಪಿಸಲಾಗಿತ್ತು. ಆದರೂ ಈ ಬಗ್ಗೆ ಸಂಬಂಧ ಪಟ್ಟವರು  ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದರು.

ವಿದ್ಯಾರ್ಥಿಗಳ ಸಮಸ್ಯೆಗೆ ಉತ್ತರಿಸಿದ ಎಕ್ಕಾರು ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ, ರಾಜ್ಯ ಹೆದ್ದಾರಿ ವಿಸ್ತರಣೆಗೆ ಏನೆಲ್ಲಾ ಮಾಡಲು ಸಾಧ್ಯ ಅದನ್ನು ಗ್ರಾಮಪಂಚಾಯತ್ ನಿಂದ ಮಾಡಲಾಗಿದೆ. ಪೊಲೀಸ್ ಇಲಾಖೆ ಕೂಡ ಮೇಲಾಧಿಕಾರಿಗಳ ಮೂಲಕ ಸರಕಾರದ ಗಮನಹರಿಸಿದ್ದಾರೆ ಎಂದರು.

ಮಕ್ಕಳ ಗ್ರಾಮ ಸಭೆಯಲ್ಲಿ ಅಪೌಷ್ಠಿಕ ಮಕ್ಕಳ ಸ್ಥಿತಿಗತಿ ಬಗ್ಗೆ ಆಡಳಿತದ ಕ್ರಮದ ಬಗ್ಗೆ  ಅಧಿಕಾರಿಗಳು ಉತ್ತರಿಸಿದರು. ಎನ್ ಅರ್ ಇ ಜಿ ಯೋಜನೆ ಬಳಸಿ ಶಾಲೆಗಳ ಬೇಡಿಕೆ ಈಡೇರಿಸಿ ಎಂದು ಶಾಲಾ ಮಕ್ಕಳು ಸ್ಥಳೀಯ ಆಡಳಿತದ ಗಮನ ಸೆಳೆದರು.

ಮಕ್ಕಳ ಗ್ರಾಮ ಸಭೆಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಭಾ, ಪೊಲೀಸ್ ಇಲಾಖೆಯ ಬಜ್ಪೆ ಪೊಲೀಸ್ ಠಾಣೆಯ ಎಸ್.ಐ ಕಮಲ, ಆರೋಗ್ಯ ಇಲಾಖೆಯ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಮಮತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಇಂದಿರಾ ಇಲಾಖೆಗಳ ಬಗ್ಗೆ ಮಾಹಿತಿಗಳನ್ನು ನೀಡಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಜಾತ, ಶಾಲಾ ಮುಖ್ಯ ಶಿಕ್ಷಕಿ ಶಶಿಪ್ರಭಾ, ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಶ್, ಎಲ್ಲಾ ಶಾಲೆಗಳ ಶಿಕ್ಷಕ ಪ್ರತಿನಿಧಿಗಳು, ಗ್ರಾಮ ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ದೀಪಿಕಾ ಗ್ರಾಮ ಸಭೆಯ ಕಲಾಪಗಳನ್ನು ಸಂಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News