ಜಿಎಸ್‌ಟಿ ಬಾಕಿ:ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಘರ್ಷ ಸಾಧ್ಯತೆ ಕುರಿತು ಶಿವಸೇನೆ ಎಚ್ಚರಿಕೆ

Update: 2019-12-14 16:07 GMT

ಮುಂಬೈ,ಡಿ.14: ಜಿಎಸ್‌ಟಿ ಪರಿಹಾರವನ್ನು ಪಾವತಿಸಲು ಮೋದಿ ಸರಕಾರವು ವಿಫಲಗೊಂಡರೆ ಅದು ರಾಜ್ಯಗಳು ಮತ್ತು ಕೇಂದ್ರದ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಶಿವಸೇನೆ ಶನಿವಾರ ಎಚ್ಚರಿಕೆಯನ್ನು ನೀಡಿದೆ. ದೇಶದಲ್ಲಿಯ ಆರ್ಥಿಕ ಅರಾಜಕತೆಗೆ ಕೇಂದ್ರದ ನೀತಿಗಳು ಕಾರಣವಾಗಿವೆ ಎಂದೂ ಅದು ಹೇಳಿದೆ.

ಜಿಎಸ್‌ಟಿ ಜಾರಿಯಿಂದಾಗಿ ಆದಾಯ ನಷ್ಟಕ್ಕಾಗಿ ಪರಿಹಾರವಾಗಿ ರಾಜ್ಯಗಳಿಗೆ 50,000 ಕೋ.ರೂ.ಗಳನ್ನು ನೀಡುವುದಾಗಿ ಕೇಂದ್ರವು ಭರವಸೆ ನೀಡಿತ್ತು. ಆದರೆ ಕಳೆದ ನಾಲ್ಕು ತಿಂಗಳುಗಳಿಂದಲೂ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಪಾವತಿಯಾಗಿಲ್ಲ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಲೇಖನದಲ್ಲಿ ತಿಳಿಸಿರುವ ಶಿವಸೇನೆ,ಈ ಹಣವು ರಾಜ್ಯಗಳಿಗೆ ಸೇರಿದೆ ಮತ್ತು ಇನ್ನಷ್ಟು ವಿಳಂಬವು ಅವುಗಳ ಆರ್ಥಿಕ ಸ್ಥಿತಿಯನ್ನು ಹದಗೆಡಿಸಲಿದೆ. ಸಂಪನ್ಮೂಲಗಳಲ್ಲಿ ತಮ್ಮ ಹಕ್ಕುಬದ್ಧ ಪಾಲು ತಮಗೆ ಸಿಗದಿದ್ದರೆ ರಾಜ್ಯಗಳು ಕೇಂದ್ರದ ವಿರುದ್ಧ ಧ್ವನಿಯೆತ್ತಬೇಕಾಗುತ್ತದೆ ಎಂದು ಹೇಳಿದೆ.

ತಯಾರಿಕೆ ಮುಖ್ಯ ಚಟುವಟಿಕೆಯಾಗಿರುವ ರಾಜ್ಯಗಳು ಮಹಾನಗರ ಪಾಲಿಕೆಗಳು ಸಂಗ್ರಹಿಸುತ್ತಿದ್ದ ಆಕ್ಟ್ರಾಯ್ ರದ್ದುಗೊಂಡ ಬಳಿಕ ಸಂಕಟಕ್ಕೆ ಸಿಲುಕಿದ್ದವು. ಆಗಲೂ ಪರಿಹಾರವನ್ನು ನೀಡುವುದಾಗಿ ಕೇಂದ್ರವು ಭರವಸೆ ನೀಡಿತ್ತು. ಆದರೆ ಈವರೆಗೂ ಅದು ಭರವಸೆಯಾಗಿಯೇ ಉಳಿದಿದೆ ಎಂದು ಹೇಳಿರುವ ಶಿವಸೇನೆ,ಭಾರತ ಪೆಟ್ರೋಲಿಯಮ್‌ನಂತಹ ಲಾಭದಲ್ಲಿರುವ ಸಾರ್ವಜನಿಕ ಕ್ಷೇತ್ರದ ಉದ್ಯಮಗಳನ್ನು ಮಾರಾಟ ಮಾಡಲಾಗುತ್ತಿದೆ ಮತ್ತು ಪ್ರಧಾನಿಯವರ ವಿದೇಶ ಪ್ರಯಾಣಗಳಿಗಾಗಿ ವ್ಯಯಿಸಿದ 500 ಕೋ.ರೂ.ಗಳನ್ನು ಏರ್ ಇಂಡಿಯಾಕ್ಕೆ ನೀಡಲೂ ಕೇಂದ್ರದ ಬಳಿ ಹಣವಿಲ್ಲ. ಹೀಗಾಗಿ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಸಿಗುವುದು ಅನುಮಾನ ಎಂದು ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News