ಆಮ್ ಆದ್ಮಿ ಪಾಳಯಕ್ಕೆ ‘ಚುನಾವಣಾ ಚಾಣಕ್ಯ’ ಪ್ರಶಾಂತ್

Update: 2019-12-14 17:20 GMT

ಹೊಸದಿಲ್ಲಿ, ಡಿ.14: 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಪ್ರಧಾನಿ ಗದ್ದುಗೆಯನ್ನು ಏರುವಂತೆ ಮಾಡುವಲ್ಲಿ ಯಶಸ್ವಿ ಪಾತ್ರ ವಹಿಸಿದ್ದ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಈಗ ಆಮ್ ಆದ್ಮಿ ಪಕ್ಷದ ಜೊತೆ ಕೈಜೋಡಿಸಿದ್ದಾರೆ.

ಕಿಶೋರ್ ಅವರ ಚುನಾವಣಾ ಪ್ರಚಾರ ಏಜೆನ್ಸಿಯಾದ ರಾಜಕೀಯ ಚುನಾವಣಾ ಕ್ರಿಯಾ ಸಮಿತಿ (ಐಪಿಎಸಿ)ಯು ಮುಂಬರುವ ದಿಲ್ಲಿ ಲೋಕಸಭೆಯಲ್ಲಿ ತನ್ನ ಪಕ್ಷದ ವರ್ಚಸ್ಸಿನ ಬೆಳವಣಿಗೆಗೆ ಕೆಲಸ ಮಾಡಲಿದೆಯೆಂದು ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಶನಿವಾರ ತಿಳಿಸಿದ್ದಾರೆ.

2017ರ ಪಂಜಾಬ್ ಲೋಕಸಭಾ ಚುನಾವಣೆಯಲ್ಲಿ ಐಪಿಎಸಿಯು ಎಎಪಿಯ ವಿರುದ್ಧವಾಗಿ ಕಾರ್ಯನಿರ್ವಹಿಸಿತ್ತು. ಆ ಚುನಾವಣೆಯಲ್ಲಿ ಅದು ಕಾಂಗ್ರೆಸ್ ಪಕ್ಷದ ಚುನಾವಣಾ ಕಾರ್ಯತಂತ್ರವನ್ನು ನಿರ್ವಹಿಸಿತ್ತು. ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳಲ್ಲೂ ಅದು ಕಾಂಗ್ರೆಸ್‌ನ ಪರವಾಗಿ ಕೆಲಸ ಮಾಡಿತ್ತು.

ದಿಲ್ಲಿ ವಿಧಾನಸಭಾ ಚುನಾವಣೆಗಳಿಗೆ ಎರಡು ತಿಂಗಳುಗಳು ಉಳಿದಿರುವಂತೆಯೇ ಐಪಿಎಸಿ ಜೊತೆ ಎಎಪಿ ಕೈಜೋಡಿಸಿರುವುದು ಭಾರೀ ಮಹತ್ವವನ್ನು ಪಡೆದಿದೆ. 2015ರ ದಿಲ್ಲಿ ಚುನಾವಣೆಯಲ್ಲಿ ಎಎಪಿಯು ತನ್ನ ಎದುರಾಳಿಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ಪರಾಭವಗೊಳಿಸಿ, ಭಾರೀ ಬಹುಮತದೊಂದಿಗೆ ಅಧಿಕಾರಕ್ಕೇರುವಲ್ಲಿ ಸಫಲವಾಗಿತ್ತು. ಆ ಚುನಾವಣೆಯಲ್ಲಿ ಅದು 54.5 ಶೇಕಡ ಮತಗಳನ್ನು ಗಳಿಸಿತ್ತು ಹಾಗೂ 67ರಿಂದ 70 ಸ್ಥಾನಗಳನ್ನು ಗೆದ್ದಿತ್ತು. ಹಾಲಿ ದಿಲ್ಲಿ ವಿಧಾನಸಭೆಯ ಅವಧಿಯು 2020ರ ಫೆಬ್ರವರಿಗೆ ಕೊನೆಗೊಳ್ಳಲಿದೆ.

2015ರ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪ್ರದರ್ಶಿಸಿದ್ದ ಅದ್ಬುತ ನಿರ್ವಹಣೆಯನ್ನು ಪುನಾರವರ್ತಿಸಲ ಎಎಪಿ ಬಯಸಿದೆ. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಎಲ್ಲಾ ಏಳು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ಸಫಲವಾಗಿರುವುದು ಎಎಪಿಯ ಆತಂಕಕ್ಕೆ ಕಾರಣವಾಗಿದೆ.

 2014ರ ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ಪಾಳಯದಿಂದ ಹೊರಬಿದ್ದ ಪ್ರಶಾಂತ್ ಕಿಶೋರ್ ಅವರು 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ಹಾಗೂ ಈ ವರ್ಷದ ಆರಂಭದಲ್ಲಿ ನಡೆದ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಜಗನ್‌ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪರವಾಗಿ ಚುನಾವಣಾ ಪ್ರಚಾರ ಕಾರ್ಯತಂತ್ರವನ್ನು ರೂಪಿಸಿ, ಆ ಪಕ್ಷಗಳು ಅಧಿಕಾರಕ್ಕೇರುವಂತೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News