ಸಂತೆ ಉಳಿಸಲು ಹೋರಾಟ ನಡೆಸಿದ ಬಿಜೆಪಿಯಿಂದಲೇ ಸಂತೆಯನ್ನು ಇಲ್ಲವಾಗಿಸುವ ಷಡ್ಯಂತ್ರ: ಮಹಮ್ಮದ್ ಆಲಿ

Update: 2019-12-14 17:25 GMT

ಪುತ್ತೂರು: ಪುತ್ತೂರಿನ ಇತಿಹಾಸ ಪ್ರಸಿದ್ದ ಸೋಮವಾರದ ಸಂತೆಯನ್ನು ಉಳಿಸಬೇಕೆಂದು ಈ ಹಿಂದೆ ಹೋರಾಟ ನಡೆಸಿದ ಬಿಜೆಪಿಗರು ಇದೀಗ ವಾರದ ಸಂತೆಯನ್ನು ಇಲ್ಲವಾಗಿಸುವ ಷಡ್ಯಂತ್ರ ರೂಪಿಸುತ್ತಿದ್ದಾರೆ. ಈ ಬಗ್ಗೆ ಸಂತೆ ವ್ಯಾಪಾರಿಗಳ ಸಹಕಾರದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪುತ್ತೂರು ನಗರಸಭೆಯ ಮಾಜಿ ವಿಪಕ್ಷ ನಾಯಕ ಮಹಮ್ಮದ್ ಆಲಿ ತಿಳಿಸಿದ್ದಾರೆ.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು 2016ರಲ್ಲಿ ಉಪವಿಭಾಗದ ಕಾರ್ಯ ನಿರ್ವಾಹಕ ದಂಡಾದಿಕಾರಿಗಳ ಆದೇಶದಂತೆ ಎಪಿಎಂಸಿಗೆ ಸ್ಥಳಾಂತರಿದ ಸಂದರ್ಭದಲ್ಲಿ ನಗರಸಭೆಯ ವಿರುದ್ದ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಅವರು ಕೇಸು ದಾಖಲಿಸಿದ್ದರು. ಅಲ್ಲದೆ ರಾಜೇಶ್ ಬನ್ನೂರು ಅವರ ನೇತೃತ್ವದಲ್ಲಿ ಬಿಜೆಪಿಗರು ಹಾಗೂ ಕಾಂಗ್ರೆಸ್ ಪಕ್ಷದ ಒಂದು ಗುಂಪು ಪ್ರತಿಭಟನೆ ನಡೆಸಿ ಸ್ಥಳಾಂತರವನ್ನು ತೀವ್ರವಾಗಿ ವಿರೋಧಿಸಿದ್ದರು. 

ಬಳಿಕದ ಬೆಳವಣಿಗೆಯಲ್ಲಿ ವಾರದ ಸಂತೆಯನ್ನು ಪುತ್ತೂರಿನ ಕಿಲ್ಲೆ ಮೈದಾನದಲ್ಲಿಯೇ ಮುಂದುವರಿಸಲಾಗಿತ್ತು.  ಇದೀಗ ಶಾಸಕ ಸಂಜೀವ ಮಠಂದೂರು ಅವರು ಎಸ್‍ಎಫ್‍ಸಿ ಯೋಜನೆಯಡಿಯಲ್ಲಿ ಮಂಜೂರುಗೊಂಡಿರುವ ರೂ. 5ಕೋಟಿಯಲ್ಲಿ ನಗರಸಭೆಯು ಸಂತೆ ಮಾರುಕಟ್ಟೆ ನಿರ್ಮಿಸಲು ಮೀಸಲಾಗಿರಿಸಿರುವ ಜಾಗವಾದ ಹಳೇ ಪುರಸಭಾ ಕಟ್ಟಡದ ಸ್ಥಳದಲ್ಲಿ ನೂತನವಾಗಿ ನಗರಸಭಾ ಕಚೇರಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಜಾಗದಲ್ಲಿ ಈಗಾಗಲೇ ರೂ. 1 ಕೋಟಿ ಸಂತೆ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆಯೂ ನಡೆದಿದೆ. ಆದರೆ ಆ ಸ್ಥಳದಲ್ಲಿ ಸಂತೆ ಮಾರುಕಟ್ಟೆ ನಿರ್ಮಾಣವಾಗಬಾರದು ಎಂಬ ದುರುದ್ದೇಶದಿಂದ ಅಗತ್ಯವಿಲ್ಲದಿದ್ದರೂ ರೂ. 2 ಕೋಟಿ ಅನುದಾನ ಕಾದಿರಿಸಿದ್ದು, ಸರ್ಕಾರದ ಹಣವನ್ನು ದುರುಪಯೋಗ ಪಡಿಸಲಾಗುತ್ತಿದೆ. ಪುತ್ತೂರು ನಗರ ಸಭೆಗೆ ಈಗಾಗಲೇ ಎಡಿಬಿ ಅನುದಾನದಲ್ಲಿ ಸುಸಜ್ಜಿತ ಕಚೇರಿ ಇದ್ದು, ಅಲ್ಲದೆ ಅದನ್ನು ದುರಸ್ತಿಪಡಿಸಲು ಅಲ್ಲಿಯೇ ಸಾಕಷ್ಟು ಸ್ಥಳಾವಕಾಶವಿದೆ. ಶಾಸಕರು ಉತ್ತಮ ಚಿಂತನೆಯನ್ನು ಹೊಂದಿದ್ದು, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಉತ್ಸಾಹ ಹುಮ್ಮಸ್ಸು ಹೊಂದಿದ್ದಾರೆ. ಆದರೆ ಈ ವಿಚಾರದಲ್ಲಿ ಶಾಸಕರನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. 

ಸಂತೆ  ಸ್ಥಳಾಂತರಗೊಂಡಾಗ ಗೊಂದಲ ಮೂಡಿಸಿ ಪ್ರತಿಭಟನೆ ನಡೆಸಿ ತಮಗೆ ಸಂತೆಯ ಬಗ್ಗೆ ಕಾಳಜಿಯಿದೆ ಎಂದು ತೋರ್ಪಡಿಸಿದ ಬಿಜೆಪಿಗರು ಹಳೇ ಪುರಸಭಾ ಕಚೇರಿ ಸ್ಥಳದಲ್ಲಿ ಸಂತೆ ಮಾರುಕಟ್ಟೆ ಮಾಡಲು ಇವರ ವಿರೋಧವೇಕೆ? ಈ ಸ್ಥಳದಲ್ಲಿ ನಗರಸಭಾ ಕಚೇರಿ ನಿರ್ಮಾಣಗೊಂಡಲ್ಲಿ ಸಂತೆ ಮಾರುಕಟ್ಟೆಯನ್ನು ಎಲ್ಲಿ ನಿರ್ಮಿಸುತ್ತಾರೆ? ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಬೇಕು ಎಂದು ಆಗ್ರಹಿಸಿದರು. 

ಇದೀಗ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿರುವ ವಾರದ ಸಂತೆಯು ತಾತ್ಕಾಲಿಕ ವ್ಯವಸ್ಥೆಯಾಗಿದೆ. ಮಳೆಗಾಲದಲ್ಲಿ ಕೆಸರು ತುಂಬಿ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ನಮ್ಮ ಆಡಳಿತ ಅವಧಿಯಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ಕಿಲ್ಲೆ ಮೈದಾನ ಅಭಿವೃದ್ಧಿಗಾಗಿ ಅನುದಾನ ಮಂಜೂರುಗೊಳಿಸಿದ್ದು, ಈ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಬಳಿಕ ಇಲ್ಲಿ ಸಂತೆ ವ್ಯಾಪಾರ ನಡೆಸುವುದು ಕಷ್ಟಸಾಧ್ಯವಾಗಿದೆ. ಈ ಹಿನ್ನಲೆಯಲ್ಲಿ ವಾರದ ಸಂತೆಗೆ ಶಾಶ್ವತ ವ್ಯವಸ್ಥೆ ಕಲ್ಪಿಸಲು ಹಳೆ ಪುರಸಭಾ ಕಚೇರಿಯಲ್ಲಿ ಸುಸಜ್ಜಿತವಾದ ಸಂತೆ ಮಾರುಕಟ್ಟೆ ನಿರ್ಮಿಸಲು ಹಾಕಿರುವ ಯೋಜನೆಗೆ ಬಿಜೆಪಿ ಕಲ್ಲು ಹಾಕಿ ಸಂತೆ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ವಂಚನೆ ಎಸಗುತ್ತಿದೆ. ಈ ಮೂಲಕ ನೂರಾರು ವರ್ಷಗಳಿಂದ ನಡೆಯುತ್ತಿರುವ ಪುತ್ತೂರಿನ ಐತಿಹಾಸಿಕ ವಾರದ ಸಂತೆಯನ್ನು  ಇಲ್ಲವಾಗಿಸಲು ಪ್ರಯತ್ನಿಸುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಮಾಜಿ ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ, ಉಷಾ ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News