ದೇರಳಕಟ್ಟೆ: 'ಸ್ಟೆಮ್ ಕಾನ್ 2019' ರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆ

Update: 2019-12-14 17:30 GMT

ಕೊಣಾಜೆ: ದೇರಳಕಟ್ಟೆಯ ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ ಯ  ಕೆ.ಎಸ್ ಹೆಗ್ಡೆ ಆಸ್ಪತ್ರೆ ಹಾಗೂ ಐಸಿಆರ್ ಎಸ್ ಸಹಭಾಗಿತ್ವದಲ್ಲಿ 'ಸ್ಟೆಮ್ ಕಾನ್ 2019' ಕಾಂಡಕೋಶ -ಆಧಾರಿತ ಪುನರುತ್ಪಾದಕ ಮತ್ತು  ಜೀವಕೋಶದ ಔಷಧಿಯ ಪ್ರಸ್ತುತ ಪ್ರಗತಿಯ ಕುರಿತು ಮೂರನೇ ದ್ವೈವಾರ್ಷಿಕ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆಯು ಕ್ಷೇಮದ ನೂತನ ಸಭಾಂಗಣದಲ್ಲಿ ಶನಿವಾರ ನಡೆಯಿತು.

ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಿ, ಇಂದು ವೈದ್ಯಕೀಯ  ಸಂಶೋಧನಾ ಕ್ಷೇತ್ರದಲ್ಲಿ ಆಧುನಿಕ‌ ತಂತ್ರಜ್ಞಾನಗಳ ಅನುಕೂಲತೆಯೊಂದಿಗೆ ಕ್ರಾಂತಿಯುತ ಬದಲಾವಣೆಗಳಾಗುತ್ತಿವೆ. ಯುವ ಸಮುದಾಯ ಇಂತಹ ಕ್ಷೇತ್ರದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡು ಹಾಗೂ ಅವಕಾಶಗಳನ್ನು ಬಳಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವಂತಾಗಬೇಕು ಎಂದು ಹೇಳಿದರು.

ಇಂತಹ ಪ್ರಮುಖ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವುದರಿಂದ ಬಹಳಷ್ಟು ಕ್ಲಿಷ್ಟಕರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು, ಗೊಂದಲಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ಯುವ ಸಮುದಾಯ ಕಾರ್ಯಗಾರವನ್ನು ಲಘುವಾಗಿ ಭಾವಿಸದೆ ಗಂಭೀರವಾಗಿ ಸ್ವೀಕರಿಸಿ ಮುನ್ನಡೆಯಬೇಕಿದೆ. ವಿವಿಧ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಲು ಸಹಕಾರಿಯಾಗಲೆಂದು ಹಾರೈಸಿದರು.

ಕೆಂಟ್ ಯುನೈಟೆಡ್ ಕಿಂಗ್ ಡಮ್ ನ  ಕ್ರೈಸ್ಟ್ ಚರ್ಚ್ ವಿ.ವಿ ಸಂಶೋಧನಾ ಕೇಂದ್ರದ ನಿರ್ದೇಶಕ ಮತ್ತು ಮೂಳೆ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಡಾ ಎ.ಅನಂತರಾಮ ಶೆಟ್ಟಿ ಮಾತನಾಡಿ, ನಿಟ್ಟೆ ವಿ.ವಿ ಯಲ್ಲಿ ಪ್ರಾರಂಬಿಸಲ್ಪಟ್ಟ ಸ್ಟೆಮ್ ಕಾನ್ ಕಾರ್ಯಾಗಾರವು ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯ. ಎರಡು ದಿವಸಗಳ ಕಾಲ ನಡೆಯುವ ಕಾರ್ಯಾಗಾರದಲ್ಲಿ ತಮ್ಮ ಪ್ರಶ್ನೆಗಳಿಗೆ ತಜ್ಞರಲ್ಲಿ ಉತ್ತರ ಕಂಡುಕೊಂಡು ಜ್ಞಾನ ವೃದ್ಧಿಸಿಕೊಳ್ಳುವಂತೆ ಹೇಳಿದರು.

ಸ್ವೀಡನ್ ನ ಕಾರ್ಟಿಲೇಜ್ ರಿಸರ್ಚ್ ಯುನಿಟ್ ಎಟ್ ಗೋತನ್ ಬರ್ಗ್ ಸದಸ್ಯರಾದ ಪ್ರೊ.ಡಾ.ಮ್ಯಾಟ್ಸ್ ಬ್ರಿಟ್ ಬರ್ಗ್ ಶುಭಹಾರೈಸಿದರು.
ಸೌತ್ ಕೊರಿಯದ ಕೆಥೋಲಿಕ್ ಯುನಿವರ್ಸಿಟಿ ಸೆಲ್ ಥೆರಫಿ ನಿರ್ದೇಶಕರಾದ ಪ್ರೊ.ಸಿಯೋಕ್ ಜಂಗ್ ಕಿಮ್ ಅತಿಥಿಗಳಾಗಿ ಭಾಗವಹಿಸಿದ್ದರು.
ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ ಕುಲಪತಿ ಪ್ರೊ.ಡಾ .ಬಿ.ಸತೀಶ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿಟ್ಟೆ ವಿಶ್ವವಿದ್ಯಾಲಯದ ಡಾ .ಎಮ್ ಶಾಂತರಾಮ ಶೆಟ್ಟಿ, ಡಾ.ಅಲ್ಕ ಕುಲಕರ್ಣಿ, ಡಾ.ಎಮ್.ಎಸ್ ಮೂಡಿತ್ತಾಯ, ಡಾ.ಕೃಷ್ಣ ನಾಯಕ್ ,ಕ್ಷೇಮ ಮೆಡಿಕಲ್ ಕಾಲೇಜ್ ಡೀನ್ ಡಾ.ಪಿ.ಎಸ್ ಪ್ರಕಾಶ್, ಡಾ.ಜಯಪ್ರಕಾಶ್ ಶೆಟ್ಟಿ, ಕೆಎಮ್ ಸಿ ಆಸ್ಪತ್ರೆಯ ಡಾ.ಯೋಗೀಶ್ ಕಾಮತ್ ಮೊದಲಾದವರು ಇದ್ದರು.

ಡಾ.ಎ.ವೀಣಾ ಶೆಟ್ಟಿ ಸ್ವಾಗತಿಸಿ, ಡಾ.ಬಿ.ಮೋಹನ್ ಕುಮಾರ್ ವಂದಿಸಿದರು.ಡಾ.ಸಿದ್ದಾರ್ಥ್ ಎಮ್ ಶೆಟ್ಟಿ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News