ಡಿ.18ರಿಂದ ಅಖಿಲ ಭಾರತ ಅಂತರ್ ವಿವಿ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್

Update: 2019-12-15 12:14 GMT

ಉಡುಪಿ, ಡಿ.15: ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘದ ಆಶ್ರಯ ದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಸಹಭಾಗಿತ್ವ ದಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ವಿಭಾಗದ ಕಬಡ್ಡಿ ಚಾಂಪಿಯನ್‌ಶಿಪ್ ಡಿ.18ರಿಂದ 21ರವರೆಗೆ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ.

ಕರ್ನಾಟಕ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ರಾಷ್ಟ್ರ ಮಟ್ಟದ ಈ ಪಂದ್ಯಾಟದಲ್ಲಿ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ವಲಯಗಳಲ್ಲಿ ವಿಜೇತರಾದ ತಲಾ ನಾಲ್ಕು ತಂಡಗಳಂತೆ ಒಟ್ಟು 16 ತಂಡಗಳು ಭಾಗವಹಿಸ ಲಿವೆ ಎಂದು ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್ ಇಂದು ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಂದ್ಯಾಟವನ್ನು ಡಿ.18ರಂದು ಬೆಳಗ್ಗೆ 10ಗಂಟೆಗೆ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸಲಿರು ವರು. ಮಂಗಳೂರು ವಿವಿ ಉಪಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಲಿರು ವರು. ಕೇಂದ್ರ ಯುವಜನ ಸೇವೆ, ಅಲ್ಪಸಂಖ್ಯಾತ ಹಾಗೂ ಕ್ರೀಡಾ ಸಚಿವ ಕಿರೆನ್ ರಿಜುಜು, ರಾಜ್ಯ ಸಚಿವರಾದ ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಭಾರತ ಕಬಡ್ಡಿ ತಂಡದ ಉಪನಾಯಕ ಮಣಿಂದರ್ ಸಿಂಗ್ ಮೊದಲಾದವರು ಭಾಗವಹಿಸಲಿರುವರು.

ಡಿ.21ರಂದು ರಾತ್ರಿ 8ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮೊದಲಾ ದವರು ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿರುವರು. ಈ ಪಂದ್ಯಾಟದಲ್ಲಿ 20 ಮಂದಿ ಪ್ರೊ ಕಬಡ್ಡಿಯ ಆಟಗಾರರು ಕೂಡ ಆಡಲಿದ್ದಾರೆ. ನಾಲ್ಕು ದಿನಗಳಲ್ಲಿ ಒಟ್ಟು 28 ಪಂದ್ಯಗಳು ನಡೆಯಲಿವೆ ಎಂದು ಅವರು ತಿಳಿಸಿದರು.

ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಡಿ.20ರಂದು ಸಂಜೆ 5ಗಂಟೆಗೆ ಇದೇ ವೇದಿಕೆಯಲ್ಲಿ ಪ್ರಜ್ಞಾ ಗೌರವ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಕ್ರೀಡಾ ಸಾಧಕರನ್ನು ಮತ್ತು ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 10 ಪ್ರಾಂಶುಪಾಲರನ್ನು ಗೌರವಿಸ ಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ.ಕೆ., ಕಾಲೇಜಿನ ಗೌರವ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್, ಪ್ರಾಂಶುಪಾಲ ಡಾ.ರಾಘವೇಂದ್ರ ಎ., ಉಪಪ್ರಾಂಶುಪಾಲ ಡಾ.ಪ್ರಕಾಶ್ ರಾವ್, ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು.

ಭಾಗವಹಿಸುವ ತಂಡಗಳು

ಪೂರ್ವ ವಲಯ: ಜಾನ್‌ಪುರ ವಿಬಿಎಸ್ ವಿವಿ, ಉತ್ತರ ಪ್ರದೇಶದ ವರಾನಸಿ ಎಂಜಿಕೆವಿಪಿ, ಬಿಹಾರದ ದರ್ಭಾಂಗ ಎಲ್.ಎನ್. ಮಿಥಿಲಾ ವಿವಿ, ಉತ್ತರ ಪ್ರದೇಶದ ರಾಯ್‌ಪುರದ ರವಿಶಂಕರ್ ವಿವಿ. ಉತ್ತರ ವಲಯ: ರೋತಕ್ ಎಂ.ಡಿ.ವಿವಿ, ಅಮೃತಸರ್ ಜಿಎನ್‌ಡಿಯು, ಕುರುಕ್ಷೇತ್ರ ಕೆ.ಯು., ಭೈವನಿ ಸಿಬಿಎಲ್‌ಯು. ಪಶ್ಚಿಮ ವಲಯ: ಕೋಟ ವಿವಿ, ಕೋಲಾಪುರ ಶಿವಾಜಿ ವಿವಿ, ಮುಂಬೈ ವಿವಿ, ಗಡ್‌ಚಿರೋಲಿ ಗೋಂಡಾವನ ವಿವಿ. ದಕ್ಷಿಣ ವಲಯ: ಮಂಗಳೂರು ವಿವಿ, ಚೆನ್ನೈ ವೆಲ್ಸ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್, ಟೆಕ್ನಾಲಜಿ ಆಂಡ್ ಅಡ್ವನ್ಸಡ್ ಸ್ಟಡೀಸ್, ತಿರುವೆಳ್ಳಿ ಎಂಎಸ್ ವಿವಿ, ಚೆನ್ನೈ ಎಸ್‌ಆರ್‌ಎಂ ವಿವಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News