ಯಕ್ಷಗಾನ ಆರಂಭಿಸಿದ್ದು ಮಧ್ವಾಚಾರ್ಯರು: ಬನ್ನಂಜೆ ಗೋವಿಂದಾಚಾರ್ಯ

Update: 2019-12-15 12:17 GMT

ಉಡುಪಿ, ಡಿ.15: ವಿಶ್ವಕ್ಕೆ ಶ್ರೇಷ್ಠ ತತ್ವ ಜ್ಞಾನದ ವಿಶೇಷ ಕೊಡುಗೆ ನೀಡಿದ ಆಚಾರ್ಯ ಮಧ್ವರು ತುಳು ಶಿವಳ್ಳಿ ಬ್ರಾಹ್ಮಣ ಸಮಾಜದವರು. ಅವರು ಶಾಸ್ತ್ರ ಓದಿ ತಿಳಿದುಕೊಳ್ಳಲು ಅನಾನುಕೂಲವಾದವರಿಗೆ ಯಕ್ಷಗಾನದ ಮೂಲಕ ಅದರ ಅರಿವು ಮೂಡಿಸಲು ಯಕ್ಷಗಾನ ಆರಂಭಿಸಿದರು ಎಂದು ವಿದ್ಯಾ ವಾಚಸ್ಪತಿಯ ಬನ್ನಂಜೆ ಡಾ.ಗೋವಿಂದ ಆಚಾರ್ಯ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ನಡೆದ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಧಾರ್ಮಿಕ ಚಿಂತನಾ ಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.

ಆಕಾಶದಲ್ಲಿ ನಮ್ಮ ಕಣ್ಣಿಗೆ ಕಾಣದ ನೀಲ ವರ್ಣದ ಪರದೆ ಇದೆ ಮತ್ತು ಪರಮಾಣುವನ್ನು ವಿಭಾಗ ಮಾಡಬಹುದೆಂಬ ಎರಡು ವಿಷಯಗಳನ್ನು 800 ವರ್ಷಗಳ ಹಿಂದೆಯೇ ಆಚಾರ್ಯ ಮದ್ವರು ತಿಳಿಸಿದ್ದರು. ಆದರೆ ನಾವು ಅಭಿಮಾನ ಶೂನ್ಯರು. ವಿದೇಶಿಗರು ವೈಜ್ಞಾನಿಕವಾಗಿ ಸಂಶೋಧಿಸಿ ತಿಳಿಸಿದಾಗ ನಾವು ನಂಬಿದ್ದೇವೆ. ಆದುದರಿಂದ ನಮ್ಮ ಮಕ್ಕಳಿಗೆ ಮಧ್ವಾಚಾರ್ಯರ ತತ್ವಜ್ಞಾನ ವನ್ನು ತಿಳಿಸಿ ಅದನ್ನು ಬದುಕಿನಲ್ಲಿ ಆಳವಡಿಸಿಕೊಳ್ಳುವಂತೆ ಮಾಡಬೇಕು ಎಂದರು.

ರಷ್ಯಾದಲ್ಲಿ ಮಾಧ್ವ ಸಂಘಟನೆ ರಚನೆಯಾಗುತ್ತಿದ್ದು, ಆಚಾರ್ಯರ ಗ್ರಂಥ ಗಳನ್ನು ರಷ್ಯನ್, ಇಂಗ್ಲಿಷ್ ಭಾಷೆಗೆ ಅನುವಾದಿಸಿ ಅಧ್ಯಯನ ಮಾಡಲಾಗು ತ್ತಿದೆ. ನಮ್ಮ ಸಮಾಜದಿಂದ ಬಂದಂತಹ ಗುರುಗಳಾದ ಆಚಾರ್ಯ ಮಧ್ವರ ತತ್ವಜ್ಞಾನವನ್ನು ತಾವು ಅಳವಡಿಸಿಕೊಂಡು ಜನರಿಗೆ ತಲುಪಿಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಮ್ಮೇಳನ ಸಮಿತಿಯ ಪ್ರಧಾನ ಸಂಚಾಲಕ ಎಂ.ಬಿ. ಪುರಾಣಿಕ್, ಕಾರ್ಯಾಧ್ಯಕ್ಷ ಮಂಜುನಾಥ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News