ಪೌರತ್ವ ತಿದ್ದುಪಡಿ ಕಾಯ್ದೆಯು ಆದಿವಾಸಿ, ಜನವಿರೋಧಿ, ಸಂವಿಧಾನದ ವಿರುದ್ಧ : ನ್ಯಾ. ನಾಗಮೋಹನ್ ದಾಸ್‌

Update: 2019-12-19 07:13 GMT

ಮಂಗಳೂರು, ಡಿ.15: ಎನ್‌ಆರ್‌ಸಿ ಪ್ರಕ್ರಿಯೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಆದಿವಾಸಿ ವಿರೋಧಿ, ಸಂವಿಧಾನಕ್ಕೆ ವಿರೋಧವಾದ ಜನ ವಿರೋಧಿಯಾದ ಕಾಯ್ದೆ ಎಂದು ರಾಜ್ಯ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ನ್ಯಾ. ನಾಗಮೋಹನ್ ದಾಸ್ ತಿಳಿಸಿದ್ದಾರೆ.

ನಗರದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಸಮಾನ ಮನಸ್ಕರ ಜೊತೆ ಸಮಾಲೋಚನೆ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡರು. ಭಾರತದ ಪೌರತ್ವ ತಿದ್ದುಪಡಿ ಕಾಯಿದೆ ದೇಶದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಎನ್‌ಆರ್‌ಸಿ ಪ್ರಕ್ರಿಯೆ ಮತ್ತು ಪೌರತ್ವ ತಿದ್ದುಪಡಿ ಕಾಯಿದೆ ಈ ಹಿಂದೆ ಸಂವಿಧಾನ ನೀಡಿರುವ ಪೌರತ್ವ ಕ್ಕಿಂತ ಭಿನವಾಗಿದೆ. 1950ರಲ್ಲಿ ದೇಶದ ಸಂವಿಧಾನದ ಅನುಚ್ಛೇದ 5ರಿಂದ 11 ಹೇಳಿರುವ ಪ್ರಕಾರ ಭಾರತದಲ್ಲಿ ಜನಿಸಿದವರು, ತಂದೆ ತಾಯಿಯ ಪೈಕಿ ಒಬ್ಬರು ಭಾರತದಲ್ಲಿ ಜನಿಸಿದ್ದರೆ ಅವರ ಮಕ್ಕಳು , ಭಾರತದಲ್ಲಿ ವಾಸಿಸುತ್ತಿದ್ದವರು ,ಸಂವಿಧಾನ ಅನುಷ್ಠಾನ ಗೊಳಿಸುವ 5 ವರ್ಷ ಹಿಂದೆ ಭಾರತದಲ್ಲಿ ವಾಸಿಸುತ್ತಿದ್ದವರು ಇಲ್ಲಿನ ನಾಗರಿಕರಾಗುತ್ತಾರೆ. ಆದರೆ ಈ ಬಗ್ಗೆ ಯಾವೂದೇ ಸರ್ವೆ ಆಗಿಲ್ಲ. ಹೀಗಿರುವಾಗ ಈಗ ಪೌರತ್ವ ಕಾಯಿದೆ ತಿದ್ದುಪಡಿಗೆ ಹೊರಟಿರುವುದು ನಾಗರಿಕತ್ವದ ಹಕ್ಕಿನ ಉಲ್ಲಂಘನೆ ಯಾಗಿದೆ. ಜೊತೆಗೆ ಭಾರತದ ಸಂವಿಧಾನದ ಅನುಚ್ಛೆದ 14 ಮತ್ತು 21ರಲ್ಲಿ ಹೇಳುವ ಸಮಾನತೆಯ ಹಕ್ಕಿನ ವಿರುದ್ಧವಾದ ಕಾಯ್ದೆಯಾಗಿದೆ. ಧರ್ಮದ ಆಧಾರದಲ್ಲಿ ಕಾನೂನು ರಚನೆ ಮಾಡುವುದು ಭಾರತದ ಸಂವಿಧಾನದ ಮೂಲಕ ಹೇಳಿರುವ ಮೂಲ ಸಂರಚನೆಯಾದ ಜಾತ್ಯತೀತತೆಯ ವಿರುದ್ಧವಾದ ಕಾಯ್ದೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ದೇಶದ ಬಹುತ್ವದ ಸಂರಕ್ಷಣೆಯ ಹೋರಾಟ ಅನಿವಾರ್ಯ ಇದು ಹಿಂದು -ಮುಸಲ್ಮಾನರ ನಡುವಿನ ಹೋರಾಟದ ವಿಷಯವಲ್ಲ. ಉದಾಹರಣೆಗೆ ದೇಶದಲ್ಲಿ ಪ್ರಥಮ ಬಾರಿಗೆ ಅಸ್ಸಾಂನಲ್ಲಿ ಎನ್‌ಆರ್‌ಸಿ ಪ್ರಕ್ರಿಯೆ ಆರಂಭವಾದ ಬಳಿಕ 19 ಲಕ್ಷ ಮಂದಿ ಎನ್‌ಆರ್‌ಸಿ ಪ್ರಕ್ರಿಯೆಯಿಂದ ಹೊರಗುಳಿದರು. ಈ ಪೈಕಿ 12 ಲಕ್ಷ ಮಂದಿ ಮುಸಲ್ಮಾನರಲ್ಲ. ಆರು ಲಕ್ಷ ಮಂದಿ ಮಾತ್ರ ಮುಸಲ್ಮಾನರು. ಈ 19 ಲಕ್ಷ ಜನ ಯಾವ ದೇಶದಿಂದ ಬಂದವರು ಎಂದು ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಇವರನ್ನು ಯಾವ ದೇಶಕ್ಕೆ ಕಳುಹಿಸುತ್ತಾರೆ ? ಅವರನ್ನು ಬೇರೆ ದೇಶಕ್ಕೆ ಕಳುಹಿಸಿದರೆ ಆ ದೇಶದವರು ಇವರು ನಮ್ಮ ದೇಶದವರಲ್ಲ ಎಂದು ತಿರಸ್ಕರಿಸಿದರೆ? ಅವರು ಎಲ್ಲಿಗೆ ಹೋಗಬೇಕು? ಅವರ ಪರಿಸ್ಥಿತಿ ಏನಾಗಬಹುದು ? ಒಂದು ವೇಳೆ ಅವರನ್ನು ನಿರಾಶ್ರಿತರ ಶಿಬಿರದಲ್ಲಿ ಉಳಿಸಿದರೆ ಅವರ ಖರ್ಚುಗಳನ್ನು ಯಾರು ಭರಿಸುತ್ತಾರೆ ? ಈ ಎಲ್ಲಾ ಪ್ರಶ್ನೆಗಳಿಗೆ ಈಗಿನ ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ಮಾಡಲು ಹೊರಟವರ ಬಳಿ ಉತ್ತರ ಇಲ್ಲ. ಆದುದರಿಂದ ಇದೊಂದು ಜನ ವಿರೋಧಿಯಾದ ಕಾಯ್ದೆಯಾಗಿದೆ ಎಂದು ನ್ಯಾ. ನಾಗ್‌ಮೋಹನ್ ದಾಸ್ ತಿಳಿಸಿದ್ದಾರೆ.

ಸಮಾಲೋಚನಾ ಸಭೆಯಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಐಟಿಯು ಮುಖಂಡ ಕೃಷ್ಣಪ್ಪ ಕೊಂಚಾಡಿ, ದಲಿತ ಸಂಘರ್ಷ ಸಮಿತಿಯ ಮುಖಂಡ ದೇವದಾಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News