ದೇವಸ್ಥಾನಗಳೇ ಇಡೀ ಹಿಂದೂಸ್ತಾನವನ್ನು ಆಳಬೇಕು: ಪಲಿಮಾರು ಶ್ರೀ

Update: 2019-12-15 14:57 GMT

ಉಡುಪಿ, ಡಿ.15: ಶಬರಿಮಲೆಯಲ್ಲಿರುವ ನಿಯಮಗಳು ನಾವು ಮಾಡಿರುವುದಲ್ಲ. ಅದು ಪರಂಪರೆಯಿಂದ ಬಂದ ನಿಯಮಗಳಾಗಿವೆ. ಆದುದರಿಂದ ಆ ಸಂಪ್ರದಾಯಗಳು ಕೊನೆಯ ತನಕ ಉಳಿಯಬೇಕು. ದೇವಸ್ಥಾನವನ್ನು ಮುಟ್ಟುವ ಶಕ್ತಿ ಯಾರಿಗೂ ಬಾರಬಾರದು. ದೇವಸ್ಥಾನಗಳೇ ಇಡೀ ಹಿಂದೂ ಸಮಾಜ ಮತ್ತು ಹಿಂದೂಸ್ತಾನವನ್ನು ಆಳುವ ಕಾಲ ಆದಷ್ಟು ಬೇಗ ಬರಬೇಕು ಎಂದು ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಶ್ರೀಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆಯ ವತಿಯಿಂದ ರವಿವಾರ ಶ್ರೀ ಅಯ್ಯಪ್ಪ ಭಕ್ತರ ಸಂಕೀರ್ತನಾ ಶೋಭಾಯಾತ್ರೆಯ ಅಂಗವಾಗಿ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಆಯೋಜಿಸಲಾದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಯ್ಯಪ್ಪ ಭಕ್ತರು ತಾವು ತುಂಬಾ ಇಷ್ಟ ಪಡುವ ಮಧು, ಮಾಂಸ ಆಹಾರಗಳನ್ನು 48 ದಿನಗಳ ಕಾಲ ತೊರೆದು, ದೇವರಿಗೆ ಸಮರ್ಪಿಸಿದ ಆಹಾರ ವನ್ನು ಮಾತ್ರ ಸ್ವೀಕಾರ ಮಾಡುವುದು ಬಹಳ ದೊಡ್ಡ ತ್ಯಾಗದ ಕೆಲಸ ಆಗಿದೆ. ದೇವರಿಗಾಗಿ ನಾವು ತ್ಯಾಗ ಮಾಡಿದರೆ, ದೇವರು ಬೇಗನೆ ನಮಗೆ ಅನುಗ್ರಹ ಮಾಡುತ್ತಾನೆ. ಈ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ. ಶೇಖರ್, ರಾಜ್ಯಾಧ್ಯಕ್ಷ ವಿ.ಕೃಷ್ಣಪ್ಪ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಎಸ್. ಎನ್.ಕೃಷ್ಣಯ್ಯ ಮುಖ್ಯ ಅತಿಥಿಗಳಾಗಿದ್ದರು. ಮುಖ್ಯ ಭಾಷಣಕಾರರಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಮಂಗಳೂರು ವಿಭಾಗದ ಪ್ರಮುಖ ಕೇಶವ ಬಂಗೇರ ಮಾತನಾಡಿದರು.

ದ.ಕ. ಜಿಲ್ಲಾ ಸಮಿತಿಯ ಗಣೇಶ್ ಕೋತ್ವಾಲ್, ಜಿಲ್ಲಾ ಸಮಿತಿಯ ಗೌರವಾಧ್ಯಕ್ಷರಾದ ಹರಿಯಪ್ಪ ಕೋಟ್ಯಾನ್ ಮಲ್ಪೆ, ಬಾಲ ಕೃಷ್ಣ ಗುರುಸ್ವಾಮಿ ಕಾರ್ಕಳ, ಕಾರ್ಯಾಧ್ಯಕ್ಷ ಬಾಲಕೃಷ್ಣ ಗುರುಸ್ವಾಮಿ ಮಲ್ಪೆ, ಪ್ರಧಾನ ಕಾರ್ಯದರ್ಶಿ ರಂಜಿತ್ ಶೆಟ್ಟಿ ಹಾವಂಜೆ, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಆನಂದ ಪಿ.ಸುವರ್ಣ, ಜೊತೆ ಕಾರ್ಯದರ್ಶಿ ಕೃಷ್ಣ ಆಚಾರಿ ಮೂಡುಬೆಳ್ಳೆ ಉಪಸ್ಥಿತರಿದ್ದರು.

ಸಮಿತಿ ಅಧ್ಯಕ್ಷ ರಾಧಾಕೃಷ್ಣ ಮೆಂಡನ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಪ್ರಶಾಂತ್ ಶೆಟ್ಟಿ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ ನಗರದ ಜೋಡುಕಟ್ಟೆಯಿಂದ ಆರಂಭಗೊಂಡ ಸಂಕೀರ್ತನಾ ಶೋಭಾಯಾತ್ರೆಗೆ ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು. ಬಳಿಕ ಶೋಭಾ ಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ರಥಬೀದಿಯಲ್ಲಿ ಸಮಾಪ್ತಿ ಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News