ಶಿವಳ್ಳಿ ಬ್ರಾಹ್ಮಣ ಸಮಾಜಕ್ಕೆ ಮಂತ್ರಿ ಸ್ಥಾನ ದೊರೆಯಲಿ: ಪಲಿಮಾರು ಶ್ರೀ

Update: 2019-12-15 15:00 GMT

ಉಡುಪಿ, ಡಿ.15: ಶಿವಳ್ಳಿ ಬ್ರಾಹ್ಮಣ ಸಮಾಜಕ್ಕೆ ಮಂತ್ರಿ ಸ್ಥಾನ ದೊರೆಯ ಬೇಕು. ಆದರೆ ಇದಕ್ಕೆ ಧ್ವನಿ ಕೊಡುವವರು ಯಾರು ಇಲ್ಲದಾಗಿದೆ. ಹಾಗಾಗಿ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿಬೇಕು. ಶಾಸಕ ರಘುಪತಿ ಭಟ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದರೆ, ತುಳು ಶಿವಳ್ಳಿ ಬ್ರಾಹ್ಮಣ ಸಮ್ಮೇಳನ ಸಾರ್ಥಕ ಆಗುತ್ತದೆ ಎಂದು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ನಡೆದ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಸಮಾರೋಪ ಸಮಾರಂದಲ್ಲಿ ಅವರು ಮಾತನಾಡುತಿದ್ದರು.

ಶಿವಳ್ಳಿ ಸಮಾಜದವರು ತಮ್ಮ ಮಕ್ಕಳನ್ನು ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಪರೀಕ್ಷೆಗಳಿಗೆ ಅಣಿಗೊಳಿಸಬೇಕು. ತಮ್ಮ ಮಕ್ಕಳಿಗೆ ವೈದ್ಯರು, ಎಂಜಿನಿ ಯರಿಂಗ್ ಕಲಿಸುವಂತೆ, ಒಂದು ಮಗುವನ್ನು ಐಪಿಎಸ್, ಐಎಎಸ್ ಅಧಿಕಾರಿ ಯನ್ನಾಗಿ ಮಾಡಬೇಕು. ಇದು ಸಮಾಜದ ಬೆಳವಣಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ ಎಂದರು.

ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ತುಳು ಶಿವಳ್ಳಿ ಬ್ರಾಹ್ಮಣ ಸಮಾಜ ಇನ್ನಷ್ಟು ಬಲವರ್ಧನೆ ಆಗಿ, ಸಂಘಟಿಯುತ ವಾಗಿ ಗಟ್ಟಿಗೊಳ್ಳಬೇಕು. ಸಂಘಟನೆ ಇದ್ದಲ್ಲಿ ಮಾತ್ರ ಸರಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಲೆ ಬಾಗುತ್ತಾರೆ. ನಮ್ಮ ವಿರುದ್ಧ ಮಾತನಾಡುವವರ ಬಗ್ಗೆ ಧ್ವನಿ ಎತ್ತಲು ಸಾಧ್ಯ ಆಗುತ್ತದೆ ಎಂದು ತಿಳಿಸಿದರು.

ಬ್ರಾಹ್ಮಣರು ಬುದ್ಧಿವಂತಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ನಾವು ಐಎಎಸ್, ಕೆಎಎಸ್‌ನಂತಹ ಹುದ್ದೆಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಆಡಳಿತಾತ್ಮಕ ಹಾಗೂ ರಾಜಕೀಯವಾಗಿ ನಾವು ಚಿಂತನೆ ಮಾಡುತ್ತಿಲ್ಲ. ಪ್ರಸ್ತುತ ಐಎಎಸ್, ಕೆಎಎಸ್ ಹುದ್ದೆಗಳಲ್ಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಎಡಪಂಕ್ತಿಯ ವಿಚಾರಧಾರೆಯುಳ್ಳ ವ್ಯಕ್ತಿಗಳೇ ಬಹುಸಂಖ್ಯೆಯಲ್ಲಿದ್ದಾರೆ. ಇದರಿಂದ ನಮಗೆ ಯಾವುದೇ ಪ್ರಯೋಜ ಆಗಲ್ಲ ಎಂದರು.

ನಮ್ಮ ಸಮಾಜದ ಜನರು ರಾಜಕೀಯ ಹಾಗೂ ನಾಗರಿಕ ಸೇವಾ ಹುದ್ದೆ ಯಲ್ಲಿದ್ದರೆ, ಸಮಾಜದ ಬೆಳವಣಿಗೆಗೆ ಹೆಚ್ಚು ಅನುಕೂಲ ಆಗುತ್ತದೆ. ನಾವು ರಾಜಕೀಯ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡುವುದನ್ನು ಬಿಡಬೇಕು. ಇಂದು ರಾಜಕೀಯ ಹೊಲಸಾಗಿರಬಹುದು. ಆದರೆ ಅದು ಬಹಳ ಮುಖ್ಯವಾಗಿದೆ. ಯಾವುದೇ ಪಕ್ಷ ಆಗಿರಬಹುದು. ಅದಕ್ಕೆ ನಾವು ಸೇರಿ ಪ್ರಬಲರಾಗಬೇಕು.

ಆಡಳಿತಾತ್ಮಕವಾಗಿ ನಮಗೆ ಶಕ್ತಿ ಬಂದರೆ ನಮ್ಮ ಸಮಾಜದ ಬಲವರ್ಧನೆ ಆಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಪಲಿಮಾರು ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಡಾ. ಕೆ.ಪಿ.ಪುತ್ತೂರಾಯ, ವಿದ್ವಾನ್ ಹರಿದಾಸ್ ಉಪಾಧ್ಯಾಯ, ಸಮ್ಮೇಳನ ಸಮಿತಿ ಅಧ್ಯಕ್ಷ ಡಾ.ಬಾಲಕೃಷ್ಣ ಮೂಡಂಬಡಿತ್ತಾಯ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮಾಜ ಸಾಧಕರನ್ನು ಸನ್ಮಾನಿಸಲಾಯಿತು.

ಸಮ್ಮೇಳನ ಪ್ರಧಾನ ಸಂಚಾಲಕ ಎಂ.ಬಿ.ಪುರಾಣಿಕ್ ಸಮ್ಮೇಳನದ ನಿರ್ಣಯ ಮಂಡಿಸಿದರು. ಕಾರ್ಯಾಧ್ಯಕ್ಷ ಮಂಜುನಾಥ್ ಉಪಾಧ್ಯಾಯ ಸ್ವಾಗತಿಸಿದರು. ಶ್ರೀನಿವಾಸ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News