ಡಾ. ಎಸ್.ಕೆ. ರಾಯ್ಕರ್ ನಿಧನ

Update: 2019-12-15 16:10 GMT

ಮಂಗಳೂರು, ಡಿ.15: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸ್ಥಾಪಕ ಪ್ರಾಂಶುಪಾಲ, ಹಾಲಿ ಹಿರಿಯ ಸಲಹೆಗಾರ ಡಾ.ಎಸ್.ಕೆ.ರಾಯ್ಕರ್ ಅಲ್ಪಕಾಲದ ಅಸೌಖ್ಯದ ಬಳಿಕ ರವಿವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರಾದ ಡಾ. ರಾಯ್ಕರ್ ಅವರು ಅಮೆರಿಕದಲ್ಲಿ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಸಹಿತ ಎರಡು ಪಿಎಚ್‌ಡಿ ಪಡೆದು ಉನ್ನತ ಅಧ್ಯಯನ ನಡೆಸಿದವರು. ಶಿವಮೊಗ್ಗ, ರಾಣೆಬೆನ್ನೂರು ಹಾಗೂ ರಾಯಚೂರುಗಳಲ್ಲಿ ಸುದೀರ್ಘ ಸೇವೆಯ ಬಳಿಕ ಮಂಗಳೂರಿನ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರಪ್ರಥಮ ಪ್ರಾಂಶುಪಾಲರಾಗಿ ಬಂದಿದ್ದರು.

ಮಾದರಿ ಶಿಕ್ಷಕ: ಸೈಯದ್ ಬ್ಯಾರಿ ಸಂತಾಪ

ನಿವೃತರಾದ ಬಳಿಕ ಅದೇ ಕಾಲೇಜಿನ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಬಿಐಟಿಯ ಪ್ರಪ್ರಥಮ ಪ್ರಾಂಶುಪಾಲರಾಗಿದ್ದ ಡಾ. ರಾಯ್ಕರ್ ಓರ್ವ ಮಾದರಿ ಶಿಕ್ಷಕರಾಗಿದ್ದರು. ಅವರ ಸಮರ್ಥ ಮಾರ್ಗದರ್ಶನದಲ್ಲಿ ಬಿಐಟಿ ಮೊದಲ ವರ್ಷದಿಂದಲೇ ಅತ್ಯುತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿತ್ತು. ಬಿಐಟಿ ನಾಡಿನ ಒಂದು ಪ್ರಮುಖ ಇಂಜಿನಿಯರಿಂಗ್ ಕಾಲೇಜಾಗಿ ರೂಪುಗೊಳ್ಳುವಲ್ಲಿ ಅವರ ಮಹತ್ವದ ಕೊಡುಗೆಯಿದೆ. ಅತ್ಯಂತ ಸರಳ, ಸಜ್ಜನ ಮನೋಭಾವದ ಡಾ. ರಾಯ್ಕರ್ ದಶಕಗಳ ತಮ್ಮ ಬೋಧನಾವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬೆಳೆದ ವಿದ್ಯಾರ್ಥಿಗಳು ಇಂದು ಜಗತ್ತಿನ ವಿವಿಧ ದೇಶಗಳಲ್ಲಿ ತಂತ್ರಜ್ಞರಾಗಿ, ಯಶಸ್ವಿ ಉದ್ಯಮಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳ ಜೊತೆ ಬೆರೆತು ಅವರಲ್ಲಿ ಸಮಗ್ರ ಅಭಿವೃದ್ಧಿ ತರಲು ಶ್ರಮಿಸುವ ಅವರ ಶೈಲಿ ಅತ್ಯಂತ ವಿಶಿಷ್ಟವಾಗಿತ್ತು ಮತ್ತು ಅದು ಎಲ್ಲಾ ಶಿಕ್ಷಕರಿಗೆ ಮಾದರಿಯಾಗಿತ್ತು. ಬಿಐಟಿ ಆಡಳಿತ ಮಂಡಳಿ, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಅವರ ಸೇವೆಯನ್ನು ಸದಾ ಸ್ಮರಿಸುತ್ತಾರೆ ಎಂದು ಡಾ.ರಾಯ್ಕರ್ ನಿಧನಕ್ಕೆ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಸಹಿತ ಅಪಾರ ಬಂಧುಮಿತ್ರರು, ಅಭಿಮಾನಿಗಳನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಸೋಮವಾರ (ಡಿ.16) ಬೆಂಗಳೂರಿನಲ್ಲಿ ನೆರವೇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News