ಮಂಗಳೂರು: ಗೃಹರಕ್ಷಕ ದಿನಾಚರಣೆ

Update: 2019-12-15 16:26 GMT

ಮಂಗಳೂರು, ಡಿ.15: ನಗರದ ಮೇರಿಹಿಲ್‌ನಲ್ಲಿರುವ ಗೃಹರಕ್ಷಕ ದಳದ ಕಚೇರಿಯಲ್ಲಿ ರವಿವಾರ ಗೃಹರಕ್ಷಕ ದಿನಾಚರಣೆ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ ಶೆಟ್ಟಿ ಮಾತನಾಡಿ, ಗೃಹರಕ್ಷಕರು ಯಾವುದೇ ಅಪೇಕ್ಷೆಯಿಲ್ಲದೆ ದಿನದ 24 ಗಂಟೆಯು ಕರ್ತವ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಬಿ.ಜಗದೀಶ್ ಮಾತನಾಡಿ, ಬಂದೋಬಸ್ತ್ ಕರ್ತವ್ಯಗಳಲ್ಲಿ ಪೊಲೀಸರೊಂದಿಗೆ ಗೃಹರಕ್ಷಕರೂ ಕೈಜೋಡಿಸಿ ಕೆಲಸ ಮಾಡುತ್ತಾರೆ. ಕೆಲಸಗಳಲ್ಲಿ ಅವರು ಶ್ರದ್ಧೆ ಮತ್ತು ಪ್ರಾಮಾಣಿಕತೆಯನ್ನು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.

ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲಸಾರ್ ಮಾತನಾಡಿ, ಯಾವುದೇ ಭದ್ರತೆ ಹಾಗೂ ಸವಲತ್ತು ಇಲ್ಲದೆ ಸೇವೆ ಮಾಡುವ ಗೃಹರಕ್ಷಕರ ಸೇವೆ ಅನನ್ಯವಾಗಿದೆ,. ದುಶ್ಚಟಗಳಿಂದ ದೂರವಿರಿ ಮತ್ತು ದುಶ್ಚಟಗಳನ್ನು ತಡೆಯುವ ಕಾರ್ಯ ಮಾಡಿ ಎಂದು ಕರೆ ನೀಡಿದರು. ಗೃಹ ರಕ್ಷಕ ದಳದ ಸಮಾದೇಷ್ಟ ಡಾ. ಮುರಲೀ ಮೋಹನ ಚೂಂತಾರು ಮಾತನಾಡಿ, ಸರಕಾರದಿಂದ ಆದಷ್ಟು ಬೇಗ ಗೌರವಧನ ಹೆಚ್ಚಾಗಲಿ ಎಂದು ಆಗ್ರಹಿಸಿದರು. 

ಈ ಸಂದರ್ಭ ಮುಖ್ಯಮಂತ್ರಿ ಪದಕ, ರಾಷ್ಟ್ರಪತಿಗಳ ಶ್ಲಾಘನೀಯ ಪದಕ, ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಪುರಷ್ಕೃತರಾದ ದ.ಕ. ಜಿಲ್ಲಾ ಉಪ ಸಮಾದೇಷ್ಟ ರಮೇಶ್ ಹಾಗೂ ಘಟಕಾಧಿಕಾರಿಗಳಾದ ಗೋಪಾಲ್, ವಸಂತ ಕುಮಾರ್ ಬೆಳ್ಳಾರೆ, ಪಾಂಡಿರಾಜ್ ಮೂಡುಬಿದಿರೆ ಅವರನ್ನು ಸನ್ಮಾನಿಸಲಾಯಿತು.

ಉಪಸಮಾದೇಷ್ಟ ರಮೇಶ್ ಸ್ವಾಗತಿಸಿದರು. ಬೆಳ್ತಂಗಡಿ ಘಟಕಾಧಿಕಾರಿ ಜಯಾನಂದ ಕಾರ್ಯಕ್ರಮ ನಿರೂಪಿಸಿದರು. ಸನತ್ ಕುಮಾರ್ ಆಳ್ವ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News