ಸಂವಿಧಾನದ ಮೌಲ್ಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ: ನ್ಯಾ. ನಾಗಮೋಹನ್‌ದಾಸ್

Update: 2019-12-15 16:36 GMT

ಮಂಗಳೂರು, ಡಿ.15: ಭಾರತದ ಸಂವಿಧಾನವು ಇತರ ದೇಶದ ಸಂವಿಧಾನಕ್ಕಿಂತ ಭಿನ್ನವಾಗಿದೆ. ಪ್ರತಿಯೊಬ್ಬರೂ ಸಂವಿಧಾನದ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ ದಾಸ್ ಕರೆ ನೀಡಿದರು.

ಕರ್ಣಾಟಕ ಬ್ಯಾಂಕ್ ಆಫೀಸರ್ಸ್‌ ಆರ್ಗನೈಸೇಶನ್ ವತಿಯಿಂದ ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಪಿವಿಎಸ್ ಕಲಾಕುಂಜದಲ್ಲಿ ರವಿವಾರ ನಡೆದ ಕರ್ಣಾಟಕ ಬ್ಯಾಂಕ್ ಪ್ರತಿನಿಧಿಗಳ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನವನ್ನು ಪ್ರತಿಯೊಬ್ಬರೂ ಓದಬೇಕು. ಅದರ ಮಹತ್ವವನ್ನು ಸಾರುವಲ್ಲಿ ಸರಕಾರಗಳು ಹಿಂದೆ ಬಿದ್ದಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಪಠ್ಯದಲ್ಲಿ ಸಂವಿಧಾನದ ಪಾಠವನ್ನು ಅಳವಡಿಸಲಾಗಿದೆ. ಅದನ್ನು ರಸಾಯನಶಾಸ, ಜೀವಶಾಸ ಪ್ರಾಧ್ಯಾಪಕರು ಕಲಿಸುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕೇವಲ ಉತ್ತೀರ್ಣರಾಗುವ ಉದ್ದೇಶದಿಂದ ಮಾತ್ರ ಸಂವಿಧಾನ ಕಲಿಯುತ್ತಿದ್ದಾರೆ ಎಂದು ನ್ಯಾ. ನಾಗಮೋಹನ್‌ದಾಸ್ ನುಡಿದರು.

ದೇಶದಲ್ಲಿ ಈ ಹಿಂದೆ ಶೇ.20ರಷ್ಟಿದ್ದ ಸಾಕ್ಷರತಾ ಪ್ರಮಾಣ ಈಗ ಶೇ.80ರಷ್ಟಿವೆ. 1947ರಲ್ಲಿ ಶೇ.70ರಷ್ಟಿದ್ದ ಬಡತನ ಶೇ.20ಕ್ಕೆ ಇಳಿದಿದೆ. 1951ರಲ್ಲಿ ವರ್ಷದಲ್ಲಿ 50 ಮಿಲಿಯನ್ ಟನ್ ಇದ್ದಂತಹ ಕೃಷಿ ಕ್ಷೇತ್ರದ ಉತ್ಪಾದನೆ ಸದ್ಯ 285 ಟನ್‌ಗೆ ಏರಿಕೆಯಾಗಿದೆ. ರಸ್ತೆ, ನೀರಾವರಿ ಕ್ಷೇತ್ರದಲ್ಲಿ ಸಾಧನೆ ಕಂಡಿವೆ. ಭಾರತದಲ್ಲಿ ಮಹಿಳೆಯರು, ದಲಿತರು ವಿವಿಧ ಕ್ಷೇತ್ರದಲ್ಲಿ ಸಾಧಿಸಲು ಸಂವಿಧಾನ ಮೂಲವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಜಯರಾಮ ನಾಯಕ್, ನಾಗರಾಜನ್, ರಾಮ ಮದನ್, ಪಣೀಂದ್ರ, ಮನೀಷ್ ಚೌಹಾಣ್, ರಾಘವನ್ ಸೇರಿದಂತೆ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News