ವಿಶ್ವ ಪವರ್ ಲಿಫ್ಟಿಂಗ್ ನಲ್ಲಿ ದ.ಕ ಜಿಲ್ಲೆಯ ನಮ್ಮಿರೈ ಪಾರೇಖ್‍ಗೆ ಚಿನ್ನ

Update: 2019-12-15 16:50 GMT

 ಮೂಡುಬಿದಿರೆ: ಎರಡು ದಿನಗಳ ವಿಶ್ವ ಪವರ್ ಲಿಫ್ಟಿಂಗ್ ಸ್ಪರ್ಧೆಯು ರಷ್ಯಾದ ಮಾಸ್ಕೋದಲ್ಲಿ ರವಿವಾರ ಮುಕ್ತಾಯಗೊಂಡಿದ್ದು ಈ ಸ್ಪರ್ಧೆಯಲ್ಲಿ  ಕರಾವಳಿ ಕರ್ನಾಟಕದ ನಮ್ಮಿರೈ ಪಾರೇಖ್ ವಿಶ್ವದಾಖಲೆಯ ಸಾಧನೆಯೊಂದಿಗೆ ಎರಡು ಚಿನ್ನ ಗೆದ್ದಿದ್ದಾರೆ. 

55 ಕೆಜಿಯವರೊಳಗಿನ ವಿಭಾಗದಲ್ಲಿ ಶನಿವಾರ  ಪವರ್‍ಲಿಫ್ಟಿಂಗ್‍ನಲ್ಲಿ 172.5 ಕೆ.ಜಿ. ಭಾರ ಎತ್ತಿದ ಸಾಧನೆಯೊಂದಿಗೆ ಚಿನ್ನ ಗೆದ್ದು ವಿಶ್ವದಾಖಲೆ ಬರೆದಿದ್ದಾರೆ. ರವಿವಾರ ರಾ ಡೆಡ್‍ಲಿಫ್ಟ್ ನಲ್ಲಿ ಮತ್ತೆ 165 ಕೆಜಿ ಎತ್ತುವ ಸಾಧನೆಯೊಂದಿಗೆ ಆಕೆ ಚಿನ್ನದ ಪದಕ ಬಾಚಿಕೊಂಡಿದ್ದಾರೆ.

ಈಕೆ ಮೂಲತಃ ದಕ್ಷಿಣ ಕನ್ನಡದ ವೇಣೂರಿನ ನಿವೃತ್ತ ದೈಹಿಕ ಶಿಕ್ಷಕ, ಪ್ರಸ್ತುತ ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಕರಾಗಿರುವ ಸದಾಶಿವ ರೈ ಹಾಗೂ ಮೂಡುಬಿದಿರೆ ಹೊಸಬೆಟ್ಟು ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಜಯಲಕ್ಷ್ಮೀ ದಂಪತಿಯ ಸುಪುತ್ರಿ.

ಕಡಂದಲೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಜೈನ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ, ಆಳ್ವಾಸ್‍ನಲ್ಲಿ ಬಿಕಾಂನಲ್ಲಿ ಪದವಿ ಶಿಕ್ಷಣ ಪೂರೈಸಿದ್ದರು. ಆಗಲೇ ಫುಟ್‍ಬಾಲ್, ಹರ್ಡಲ್ಸ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿದ ಸಾಧನೆ ಮಾಡಿದ್ದರು. ಬಳಿಕ ಎಂಬಿಎ ಪದವಿಯೊಂದಿಗೆ ಬೆಂಗಳೂರಿನ ಎಚ್‍ಎಸ್‍ಬಿಸಿಯಲ್ಲಿ ಎರಡು ವರ್ಷ ಉದ್ಯೋಗಿಯಾಗಿದ್ದರು. 2015ರಲ್ಲಿ ಛತ್ತೀಸ್‍ಗಡ ರಾಯ್‍ಪುರದ  ಉದ್ಯಮಿ ಸನ್ನಿ ಪಾರೇಖ್‍ರೊಂದಿಗೆ ನಮ್ಮಿರೈ ವಿವಾಹವಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News