ವಿಟ್ಲ: ಸಮಸ್ತ ಮಹಾಸಮ್ಮೇಳನ ಪ್ರಚಾರ ಸಭೆ, ಕಾಲ್ನಡಿಗೆ ರ್ಯಾಲಿ

Update: 2019-12-16 09:45 GMT

ವಿಟ್ಲ, ಡಿ. 16: ವಿಟ್ಲ ರೇಂಜ್ ಜಂಇಯ್ಯತುಲ್ ಮಹಲ್ಲಿಮೀನ್ ಮತ್ತು ಮದ್ರಸ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಇದರ 60ನೇ ವಾರ್ಷಿಕ ಮಹಾಸಮ್ಮೇಳನದ ಪ್ರಚಾರ ಸಭೆ, ಬೃಹತ್ ಕಾಲ್ನಡಿಗೆ ರ್ಯಾಲಿ ಹಾಗೂ ಸನ್ಮಾನ ಕಾರ್ಯಕ್ರಮ ರವಿವಾರ ವಿಟ್ಲದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮಾಡಿದ ಮಾಡನ್ನೂರು ದಾರುಲ್ ಹುದಾದ ಪ್ರಾಂಶುಪಾಲ ಅಡ್ವಕೇಟ್ ಮುಹಮ್ಮದ್ ಹನೀಫ್ ಹುದವಿ, ವಿಶ್ವದಲ್ಲಿ ಶಾಂತಿ ನೆಲೆಸಲು ಧಾರ್ಮಿಕ ಶಿಕ್ಷಣ ಸಂಸ್ಥೆಗಳು ಮಹತ್ತರ ಪಾತ್ರ ವಹಿಸುತ್ತದೆ. ಶಿಕ್ಷಣ ಇಲ್ಲದವರು ಅಜ್ಞಾನಿಯಾಗುತ್ತಾರೆ. ಧರ್ಮದ ಬಗ್ಗೆ ತಿಳಿಯಲು ಶಿಕ್ಷಣ ಅವಶ್ಯ ಎಂದು ಹೇಳಿದರು.

ದೇಶದಲ್ಲಿ ಮುಸಲ್ಮಾನರು ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಸಿಎಬಿಯಿಂದ ಉದ್ದೇಶಪೂರ್ವವಾಗಿ ಮುಸಲ್ಮಾನರನ್ನು ಹೊರ ಇಡಲಾಗಿದೆ ಎಂದರು. 

ಮಧ್ಯಾಹ್ನ ಐಬಿ ಹಾಲ್‍ನಿಂದ ವಿಟ್ಲ ಕೇಂದ್ರ ಜುಮಾ ಮಸೀದಿಯವರೆಗೆ ಆಕರ್ಷಕ ದಫ್ ರ್ಯಾಲಿ ನಡೆಯಿತು. ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ಕರೀಂ ಕಂಪದಬೈಲು ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬು ಮಹಮ್ಮದಾಲಿ ಫೈಝಿ ಇರ್ಫಾನಿ ಉದ್ಘಾಟಿಸಿದರು. ಅಬ್ದುಲ್ ಗಫೂರು ಹನೀಫಿ ಸಂದೇಶ ಭಾಷಣ ಮಾಡಿದರು. ಇದೇ ಸಂದರ್ಭ ಕೇಂದ್ರ ಮುಶಾವರ ಸದಸ್ಯರಾಗಿ ಆಯ್ಕೆಗೊಂಡ ಶೈಖುನಾ ಅಬ್ದುಲ್ ಖಾದರ್ ಅಲ್‍ಖಾಸಿಮಿ ಬಂಬ್ರಾಣ ಅವರನ್ನು ಶರೀಫ್ ಮೂಸಾ ಕುದ್ದುಪದವು ಸನ್ಮಾನಿಸಿದರು.

ಈ ಸಂದರ್ಭ ಮಹಮ್ಮದ್ ಮುಸ್ಲಿಯಾರ್ ಮಂಡೊಲೆ, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್ ಮುಹಮ್ಮದ್, ಕೋಶಾಧಿಕಾರಿ ಎಂ.ಎಸ್ ಹಮೀದ್ ಪುಣಚ, ವಿಟ್ಲ ಸದರ್ ಹನೀಫ್ ದಾರಿಮಿ, ಶಮೀರ್ ಪಳಿಕೆ, ಶರೀಫ್ ಕೆಲಿಂಜ ಹಾಜರಿದ್ದರು. ನೌಫಲ್ ಹುಸೈನ್ ಫೈಝಿ ಮರಕ್ಕಿನಿ ಪ್ರಸ್ತಾವಿಸಿದರು. ಎಸ್.ಎಂ ಅಬ್ಬಾಸ್ ದಾರಿಮಿ ಕೆಲಿಂಜ ಸ್ವಾಗತಿಸಿದರು. ವಿಟ್ಲ ರೇಂಜ್ ಚೆಯರ್‍ಮ್ಯಾನ್ ಹಸೈನಾರ್ ಫೈಝಿ ಖಿರಾಅತ್ ಪಠಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News