ಡಿ. 21ರಂದು ಬಂಟ್ವಾಳ ತಾಲೂಕು 15ನೇ ಮಕ್ಕಳ ಸಾಹಿತ್ಯ ಸಮ್ಮೇಳನ

Update: 2019-12-16 10:00 GMT

ವಿಟ್ಲ, ಡಿ. 16: ಮಕ್ಕಳ ಲೋಕ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ವಿಟ್ಲದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಡಿ.21ರಂದು ಬಂಟ್ವಾಳ ತಾಲ್ಲೂಕು 15ನೇ ಮಕ್ಕಳ ಸಾಹಿತ್ಯ ಸಮ್ಮೇಳನ ವಿಟ್ಲ ಸರಕಾರಿ ಶಾಲೆಯಲ್ಲಿ ನಡೆಯಲಿದ್ದು, ಸಮ್ಮೇಳನದ ಅಧ್ಯಕ್ಷೆಯಾಗಿ ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಧನ್ಯಶ್ರೀ ಬಿ. ಚಣಿಲ ಆಯ್ಕೆಯಾಗಿದ್ದಾರೆ. 

ದ.ಕ.ಜಿ.ಪಂ.ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಧನ್ಯಶ್ರೀ, ತಿರುಮಲೇಶ್ವರ ಭಟ್-ಹೇಮಾವತಿ ದಂಪತಿಯ ಪುತ್ರಿ. ವಿಟ್ಲದ ಯಕ್ಷಸಿಂಧೂರ ಪ್ರತಿಷ್ಠಾನದ ಸಂಸ್ಥಾಪಕರಾದ ಚಣಿಲ ಸುಬ್ರಹ್ಮಣ್ಯ ಭಟ್ ಇವರ ದೊಡ್ಡಪ್ಪ. ಯಕ್ಷಗಾನದ ಬಾಲಕಲಾವಿದೆಯಾದ ಇವರು ಭಾಗವತಿಕೆ, ಮದ್ದಳೆ ನಾಟ್ಯ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ. ತನ್ನ ಒಂಭತ್ತನೆ ವರ್ಷ ಪ್ರಾಯದಲ್ಲೆ ಏಕವ್ಯಕ್ತಿ ಯಕ್ಷಗಾನದ ನಿರ್ವಹಣೆ ಮೂಲಕ ಭೇಷ್ ಎನಿಸಿಕೊಂಡ ಬಾಲಪ್ರತಿಭೆ. 
ಪ್ರತಿಭಾ ಕಾರಂಜಿ ಯಕ್ಷಗಾನ ಪ್ರದರ್ಶನದಲ್ಲಿ ಜಿಲ್ಲಾ ಮಟ್ಟದಲ್ಲಿ ಬಹುಮಾನ ಪಡೆದಿರುವ ಧನ್ಯಶ್ರೀ, ಅಭಿನಯ, ಛದ್ಮವೇಷ, ಧಾರ್ಮಿಕ ಪಠಣ, ಚಿತ್ರಕಲೆ, ಪ್ರಬಂಧದಲ್ಲಿ ಪರಿಶ್ರಮ ಮುಂದುವರಿಸುತ್ತಿದ್ದಾರೆ. ಭರತನಾಟ್ಯ, ಸಂಗೀತ ವಿದ್ಯಾರ್ಥಿನಿ ಯಾಗಿದ್ದಾರೆ.

ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಇವಳ ಬರಹಗಳು ಇವಳದೇ ಚಿಂತನೆಗಳ ಮೂಲಕ ಮೂಡಿಬರುತ್ತಿವೆ. ಈ ವರ್ಷ ಧರ್ಮಸ್ಥಳದ ಶಾಂತಿವನ ಟ್ರಸ್ಟ್(ರಿ) ಸಂಘಟಿಸಿದ ಮೌಲ್ಯಶಿಕ್ಷಣ ಭಾಷಣದಲ್ಲಿ ಬಂಟ್ವಾಳ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News