ಗುಜರಾತ್ ಮಾದರಿಯ ಹಿಂಸಾಚಾರಕ್ಕೆ ಕಾರಣವಾಗಿರುವ ಕೇಂದ್ರ ಸರಕಾರದ ನೀತಿ - ಐವನ್ ಡಿ ಸೋಜ

Update: 2019-12-16 11:57 GMT

ಮಂಗಳೂರು, ಡಿ.16: ದೇಶದಲ್ಲಿ ಪೌರತ್ವ ಕಾಯಿದೆ ತಿದ್ದುಪಡಿ ವಿಚಾರದ ಮೂಲಕ ದೇಶದಾದ್ಯಂತ ನಡೆಯುತ್ತಿರುವ ಹಿಂಸಾಚಾರ ಗುಜರಾತ್ ಮಾದರಿಯಂತೆ ಸಾಗುತ್ತಿರುವುದಕ್ಕೆ ಕೇಂದ್ರ ಸರಕಾರದ ನೀತಿ ಕಾರಣ ವಾಗಿದೆ. ಆದರೆ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ತಮಗೆ ಇದು ಸಂಬಂಧಿಸಿದಂತೆ ಇಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಪೌರತ್ವ ಕಾಯ್ದೆಯ ತಿದ್ದುಪಡಿ ಬೇಡ ಎಂದು ಯಾರೂ ಹೇಳಿಲ್ಲ. ಅದರೆ ಮುಸ್ಲಿಂ ಸಮಯದಾಯವನ್ನೇ ಗುರಿಯಾಗಿಸಿ ತಿದ್ದುಪಡಿ ಮಾಡಿರುವುದು ಆತಂಕಕಾರಿಯಾಗಿದೆ. ವಿರೋಧಿಸಿ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು ಆರು ಜೀವಗಳು ಬಲಿಯಾಗಿವೆ. ಪ್ರತಿಭಟನೆ ನಡೆಯುತ್ತಿರುವಲ್ಲಿ ಪೊಲೀಸರೇ ಬಸ್ಸುಗಳಿಗೆ ಬೆಂಕಿ ಕೊಡುವುದು, ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ಹೊರತಂದು ಹಲ್ಲೆ, ದೌರ್ಜನ್ಯ ನಡೆಸುವಂತಹ ಘಟನೆಗಳು ನಡೆಯುತ್ತಿವೆ. ಸರ್ಕಾರ‌ ಯಾವುದೇ ಕಾನೂನು ಜಾರಿಗೆ ತಂದಾಗ ಅದಕ್ಕೆ ಜನರಿಂದ ವಿರೋಧ ಬಂದಾಗ ಆ ಬಗ್ಗೆ ಪುನರ್ ವಿಮರ್ಶೆ ಮಾಡುವುದು, ಚರ್ಚಿಸುವುದು ಅಗತ್ಯವಾಗಿದೆ. ಆದರೆ ಪ್ರಧಾನಿ ಮೋದಿಯವರು ತಾವು ನಡೆದಿದ್ದೇ ದಾರಿ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದು, ಹಗೆತನ ಮತ್ತು ಪ್ರತಿಷ್ಠೆ ತೋರಿಸುತ್ತಿದ್ದಾರೆ ಎಂದು ಐವನ್ ಆರೋಪಿಸಿದರು.

ಮೇಲ್ಸೇತುವೆ ಪೂರ್ಣಗೊಳಿಸಲು ಕೊನೆಯ ಗಡುವು

ಜನವರಿ ಒಂದರಂದು ಪಂಪ್ ವೆಲ್ ಮೇಲ್ಸೇತುವೆ ಉದ್ಘಾಟನೆಯ ಬಗ್ಗೆ ಸಂಸದರು ಹೇಳಿಕೆ‌ ನೀಡಿದ್ದಾರೆ. ಆದರೆ ಉದ್ಘಾಟನೆಗಾಗಿ ಕಾರ್ಯಕ್ರ‌ಮ ಮಾಡಬಾರದು ಕಾಮಗಾರಿ‌ ಸಮರ್ಪಕ ರೀತಿಯಲ್ಲಿ  ನಡೆಯಬೇಕು.‌ ಈಗ  ದಿನಗಳಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಗಮನಿಸುವಾಗ ಇನ್ನೂ ಮೂರು ತಿಂಗಳು ಕಾಮಗಾರಿ ಮುಗಿಯುವ ಅನುಮಾನ ಇದೆ.‌ ಆದರೂ ಸಂಸದರು ತಮ್ಮ ಮಾತು ಪಾಲಿಸಬೇಕು. ಒಂದು ತಾರೀಕಿನಂದು ನಾಲ್ಕು ಗಂಟೆಯ ಮೊದಲು ಮಾತು ಈಡೇರಿಸಿ ಎಂದರು.

ದಾಖಲೆಯ ಸಾಧನೆ

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಐವನ್ ಡಿ ಸೋಜರ ಐದು ವರ್ಷಗಳ ಸಾಧನೆಯ ಮಾಹಿತಿ ಪುಸ್ತಕ ವನ್ನು ಶೈಕ್ಷಣಿಕ ಚಿಂತಕ ನರಹರಿ ಬಿಡುಗಡೆ ಗೊಳಿಸಿ ಮಾತನಾಡುತ್ತಾ, ರಾಜ್ಯದ ಲ್ಲಿ ವಿಧಾನ ಪರಿಷತ್ ಕಲಾಪದಲ್ಲಿ ಶೇ 100 ಹಾಜರಾತಿಯೊಂದಿಗೆ 5 ವರ್ಷದಲ್ಲಿ 6.06 ಕೋಟಿ ರೂ. ನೆರವನ್ನು ಮುಖ್ಯ ಮಂತ್ರಿ ಪರಿಹಾರ ನಿಧಿ ಯಿಂದ ಅನಾರೋಗ್ಯ ಪೀಡಿತರಿಗೆ ಒದಗಿಸಿಕೊಟ್ಟು ಐವನ್ ಯಾರು ಮಾಡದ ದಾಖಲೆ ನಿರ್ಮಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News