ಸ್ವ ಧರ್ಮವನ್ನು ಅರಿತಾಗ ಇತರ ಧರ್ಮಗಳ ತಪ್ಪು ಕಲ್ಪನೆ ನಿವಾರಣೆ : ಮುಹಮ್ಮದ್ ಕುಂಞಿ

Update: 2019-12-16 12:16 GMT

ಮಂಗಳೂರು, ಡಿ.16: ಸ್ವ ಧರ್ಮದ ಬಗ್ಗೆ ತಿಳುವಳಿಕೆ ಇದ್ದಾಗ ಇತರ ಧರ್ಮಗಳ ಬಗ್ಗೆ ತಪ್ಪು ಕಲ್ಪನೆಗಳನ್ನು ಹೊಂದಿರಲು ಸಾಧ್ಯವಾಗದು ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ, ವಾಗ್ಮಿ ಮುಹಮ್ಮದ್ ಕುಂಞಿ ಅಭಿಪ್ರಾಯಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ಹೈಲ್ಯಾಂಡ್ ಇಸ್ಲಾಮಿಕ್ ಫೋರಂ (ಎಚ್‌ಐಎಫ್) ಹಾಗೂ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಲಾದ ಪತ್ರಕರ್ತರ ಜತೆಗಿನ ಸಮ್ಮಿಲನ ಕಾರ್ಯಕ್ರಮದಲ್ಲಿ ಧರ್ಮಗಳ ಆರಾಧನಾ ಕೇಂದ್ರಗಳಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹ, ಭಯೋತ್ಪಾದನಾ ತಾಣವೆಂಬ ಅಪಪ್ರಚಾರದಿಂದ ಧರ್ಮಗಳ ನಡುವೆ ಅಪನಂಬಿಕೆಗೆ ಕಾರಣವಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದರು.

ಮಸೀದಿ, ಮದ್ರಸಗಳಲ್ಲಿ ಶಸ್ತ್ರಾಸ್ತ್ರ ಸಂಗ್ರಹ ಭಯೋತ್ಪಾದನೆಗೆ ಕುಮ್ಮಕ್ಕು ನೀಡಲಾಗುತ್ತದೆ ಎಂಬ ನಿಗೂಢ ಅಪಪ್ರಚಾರದಿಂದಾಗಿ ಧರ್ಮದ ಬಗ್ಗೆ ಇನ್ನೊಂದು ಧರ್ಮದ ಜನಸಾಮಾನ್ಯರಲ್ಲಿ ಅಪನಂಬಿಕೆಗೆ ಕಾರಣವಾಗಿದೆ. ಹಾಗಾಗಿಯೇ ಮಸೀದಿಗಳಿಗೆ ಸಂದರ್ಶನ ಕಾರ್ಯಕ್ರಮವನ್ನು ದೇಶಾದ್ಯಂತ ನಡೆಸಲಾಗುತ್ತಿದೆ. ಮಸೀದಿಗೆ ಬರಬೇಕಾದರೆ ಯಾವುದೇ ಸಂಪ್ರದಾಯ, ಕಟ್ಟುಪಾಡುಗಳಿಲ್ಲ. ಕಾಲನ್ನು ತೊಳೆದು ಪ್ರವೇಶಿಸಿದರೆ ಸಾಕು. ಮಸೀದಿ ಹಾಗೂ ಮದ್ರಸಗಳ ಕುರಿತಂತೆ ನಡೆಸಲಾದ ಅಪಪ್ರಚಾರದಂತೆ, ಯಾವುದೇ ಮಠ ಮಂದಿರಗಳ ಬಗ್ಗೆ ಅಪಪ್ರಚಾರ ನಡೆದಿಲ್ಲ ಎಂದವರು ಹೇಳಿದರು.

ದಾರ್ಶನಿಕರು, ಸಾಧು ಸಂತರು, ಮಹಾ ಪುರುಷರ ಸಂದೇಶಗಳಿಂದ ಮಾತ್ರವೇ ಮಾನವನ ಸುಧಾರಣೆ ಸಾಧ್ಯ. ಅಂತಹ ಸುಧಾರಣೆಯ ಸಂದೇಶವನ್ನು ನೀಡಲು ಬಂದವರೇ ಪ್ರವಾದಿ ಮುಹಮ್ಮದ್‌ರವರು. ಪವಿತ್ರ ಗ್ರಂಥವಾದ ಕುರ್‌ಆನ್ ಬಹುತ್ವ ಜಗತ್ತಿನ ನಿಯಮ ಎಂದು ಸಾರಿದೆ. ಅದನ್ನೇ ಪ್ರವಾದಿ ಮಹಮ್ಮದ್‌ರವರು ಮಾನವ ಕುಲಕ್ಕೆ ಸಾರಿದ್ದಾರೆ. ಸಹಜೀವಿಯೊಂದಿಗೆ ಬದುಕುವ ರೀತಿಯೇ ಧರ್ಮ ಎಂಬುದು ಪ್ರವಾದಿಯವರ ಸಂದೇಶ. ಮಾನವರು ಹೇಗೆ ಬದುಕಬೇಕೆಂಬುದನ್ನು ಜಗತ್ತಿಗೆ ಕಲಿಸಿಕೊಟ್ಟಿದ್ದಾರೆ. ಇತರ ಧರ್ಮದ ಬಗ್ಗೆ ಗೌರವ ಇದ್ದಾಗ ಮಾತ್ರವೇ ಪ್ರಾಮಾಣಿಕವಾಗಿ ಇತರರನ್ನು ಪ್ರೀತಿಸಲು ಸಾಧ್ಯವಾಗುತ್ತದೆ. ಹಾಗಾಗಿಯೇ ಪ್ರವಾದಿ ಮುಹಮ್ಮದರು ಧಾರ್ಮಿಕ ವಾದವನ್ನು ಹೇಳಿಕೊಟ್ಟಿಲ್ಲ. ಬದಲಾಗಿ ಅವರು ಧಾರ್ಮಿಕ ಪ್ರಜ್ಞೆಯನ್ನು ಜಗತ್ತಿಗೆ ಸಾರಿದ್ದಾರೆ ಎಂದು ಅವರು ಕುರ್‌ಆನ್ ಉಲ್ಲೇಖಿಸಿ ವಿಶ್ಲೇಷಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಹಂತ ಹಂತವಾಗಿ ಮಸೀದಿ ಹಾಗೂ ಮದ್ರಸಗಳಿಗೆ ಸಂದರ್ಶನ ಕಾರ್ಯಕ್ರಮವನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ಧರ್ಮ ಗ್ರಂಥಗಳ ವ್ಯಾಖ್ಯಾನದಿಂದಾಗಿ ಸಮಾಜದಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುರ್‌ಆನ್ ವ್ಯಾಖ್ಯಾನದ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಆದರೆ ಮಸೀದಿ, ಮದ್ರಸಗಳಲ್ಲಿ ಕುರ್‌ಆನ್‌ನನ್ನು ಅರೆಬಿಕ್ ಅಥವಾ ಉರ್ದು ಭಾಷೆಯಲ್ಲಿಯೇ ಕಲಿಸಲಾಗುತ್ತದೆ. ಹಾಗಾಗಿ ಭಾಷೆಯಿಂದ ಗೊಂದಲ ಇರಬಹುದು. ಆದರೆ ಬಹುತೇಕವಾಗಿ ಈ ಸಮಸ್ಯೆಯನ್ನು ಕೂಡಾ ಪರಿಹರಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಕುರ್‌ಆನ್‌ನನ್ನು ಪ್ರಸ್ತುತಪಡಿಸುವ ಕೆಲಸಗಳು ನಡೆಯುತ್ತಲೇ ಇದೆ ಎಂದವರು ಹೇಳಿದರು.

ಝಾಕಿರ್ ನಾಯ್ಕ್  ರವರ ಧರ್ಮ ವ್ಯಾಖ್ಯಾನದಿಂದಾಗಿ ತಪ್ಪು ಸಂದೇಶಗಳು ರವಾನೆಯಾಗುತ್ತಿವೆಯೇ ಎಂಬ ಪ್ರಶ್ನೆಗೆ, ಅವರ ವ್ಯಾಖ್ಯಾನದಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ ಅವರ ಶೈಲಿಯಲ್ಲಿ ಸಮಸ್ಯೆ ಇದೆ. ಇನ್ನೊಂದು ಧರ್ಮದ ಬಗ್ಗೆ ನಾನು ಮಾತನಾಡಬಹುದು. ಆದರೆ ಅದನ್ನು ನಾನು ವ್ಯಾಖ್ಯಾನ ಮಾಡುವುದಕ್ಕಿಂತ ಆ ಧರ್ಮದವರು ಮಾಡುವುದು ಸೂಕ್ತ ಎಂದು ಮುಹಮ್ಮದ್ ಕುಂಞಿ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡುವಲ್ಲಿ ಇಂತಹ ಕಾರ್ಯಕ್ರಮಗಳು ಅನಿವಾರ್ಯ ಎಂದರು.

ಹೈಲ್ಯಾಂಡ್ ಇಸ್ಲಾಮಿಕ್ ಫೋರಂನ ಅಧ್ಯಕ್ಷ ಸಾಜಿದ್ ಎ.ಕೆ. ಉಪಸ್ಥಿತರಿದ್ದರು. ಎಚ್‌ಐಎಫ್‌ನ ಮಾಜಿ ಅಧ್ಯಕ್ಷ ಮುಹಮ್ಮದ್ ರಿಝ್ವಾನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News