ಕಾರ್ಪೊರೇಶನ್, ಸಿಂಡಿಕೇಟ್ ಬ್ಯಾಂಕ್ ವಿಲೀನಕ್ಕೆ ವಿರೋಧ : ಕರಾವಳಿಯಲ್ಲಿ ಸಂಘಟಿತ ಹೋರಾಟದ ಎಚ್ಚರಿಕೆ

Update: 2019-12-16 12:32 GMT

ಮಂಗಳೂರು, ಡಿ.16: ಕೇಂದ್ರ ಸರಕಾರವು ಕಾರ್ಪೋರೇಶನ್ ಮತ್ತು ಸಿಂಡಿಕೇಟ್ ಬ್ಯಾಂಕ್‌ನ್ನು ಇತರ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸಲು ಮಾಡಿರುವ ಆದೇಶವನ್ನು ತತ್‌ಕ್ಷಣ ಹಿಂಪಡೆಯಬೇಕು. ಇಲ್ಲವಾದಲ್ಲಿ ಕರಾವಳಿಗರಿಂದ ಸಂಘಟಿತ ಹೋರಾಟ ನಡೆಯಲಿದೆ ಎಂದು ನ್ಯಾಯವಾದಿ ದಿನೇಶ್ ಹೆಗಡೆ ಉಳಿಪಾಡಿ ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಕಾರ್ಪೋರೇಶನ್ ಮತ್ತು ಸಿಂಡಿಕೇಟ್ ಬ್ಯಾಂಕ್ ಕರಾವಳಿಯ ಜನತೆಗೆ ಹಿರಿಯರು ನೀಡಿರುವ ಆಸ್ತಿಯಾಗಿದೆ. ಅದನ್ನು ಉಳಿಸಿಕೊಳ್ಳುವುದು ಕರಾವಳಿಗರ ಕರ್ತವ್ಯ. ಜಿಲ್ಲೆಯ ಹೆಮ್ಮೆಯ ಬ್ಯಾಂಕ್‌ಗಳನ್ನು ವಿಲೀನದ ಹೆಸರಿನಲ್ಲಿ ಅಳಿಸಿ ಹಾಕುವ ಕೇಂದ್ರ ಸರಕಾರದ ನಿರ್ಧಾರವನ್ನು ತಡೆಯುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳೂ ವಿಲರಾಗಿದ್ದಾರೆ. ಸಂಸದರಾದ ನಳಿನ್‌ಕುಮಾರ್ ಕಟೀಲು ಹಾಗೂ ಶೋಭಾ ಕರಂದ್ಲಾಜೆ ಅವರು ಬ್ಯಾಂಕ್ ವಿಲೀನ ಸಂಬಂಧಿಸಿ ತಮ್ಮ ನಿಲುವುಗಳನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಟಿ. ಆರ್. ಭಟ್ ಮಾತನಾಡಿ, ಜಿಲ್ಲೆಯ ಹೆಮ್ಮೆಯ ವಿಜಯಾ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ಅವೈಜ್ಞಾನಿಕವಾಗಿ ವಿಲೀನಗೊಳಿಸುವ ಮೂಲಕ ಕಳೆದ ಜನವರಿ 1ರಂದು ಕೇಂದ್ರ ಸರಕಾರವು ಜಿಲ್ಲೆಯ ಜನತೆಗೆ ಆಘಾತವನ್ನುಂಟು ಮಾಡಿತ್ತು. ಇದೀಗ ಮಂಗಳೂರಿನಲ್ಲೇ ಸ್ಥಾಪನೆಗೊಂಡು ಮಂಗಳೂರಿನಲ್ಲೇ ಕೇಂದ್ರ ಕಚೇರಿ ಹೊಂದಿರುವ ಕಾರ್ಪೋರೇಶನ್ ಬ್ಯಾಂಕನ್ನು ಮುಂಬೈಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಯೂನಿಯನ್ ಬ್ಯಾಂಕ್ ಜೊತೆಗೆ ಹಾಗೂ ಕರಾವಳಿಯ ಸಿಂಡಿಕೇಟ್ ಬ್ಯಾಂಕ್‌ನ್ನು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೆನರಾ ಬ್ಯಾಂಕಿನೊಂದಿಗೆ ವಿಲೀನ ಮಾಡಲು ಕೇಂದ್ರ ಸರಕಾರ ಹೊರಟಿದೆ. ದೇಶದ ಆರ್ಥಿಕತೆಗೆ ಬಲ ನೀಡಿದ ಕರಾವಳಿ ಮೂಲದ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ಖಂಡನೀಯ. ಇದರ ವಿರುದ್ಧ ಕರಾವಳಿಗರು ಸಂಘಟಿತ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಮುಖಂಡರಾದ ಹರಿಕೃಷ್ಣ ಪುನರೂರು, ಕೊಲ್ಲಾಡಿ ಬಾಲಕೃಷ್ಣ ರೈ, ಮುನೀರ್ ಕಾಟಿಪಳ್ಳ, ಸದಾಶಿವ ಹೊಸಪೇಟೆ, ಹರೀಶ್ ಪುತ್ರನ್, ಪ್ರದೀಪಕುಮಾರ ಕಲ್ಕೂರ, ಇಕ್ಬಾಲ್ ಮುಲ್ಕಿ, ರತ್ನಾಕರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News