ಪೌರತ್ವ ಕಾಯ್ದೆ ಜಾರಿಗೆ ಮುನ್ನ ಭಾರತದಲ್ಲಿರುವ ತನ್ನ ಹಿಂದೂ, ಸಿಖ್ ನಾಗರಿಕರಿಗೆ ಪೌರತ್ವ ನೀಡಿದ್ದ ಅಫ್ಘಾನಿಸ್ತಾನ

Update: 2019-12-19 08:39 GMT

ಹೊಸದಿಲ್ಲಿ,ಡಿ.16: ಭಾರತದ ಸಂಸತ್ತು ಪೌರತ್ವ (ತಿದ್ದುಪಡಿ) ಮಸೂದೆ (ಸಿಎಬಿ)ಯನ್ನು ಅಂಗೀಕರಿಸುವ ಮೊದಲೇ ಅಫಘಾನಿಸ್ತಾನ ಸರಕಾರವು ಭಾರತದಲ್ಲಿ ವಾಸವಾಗಿರುವ ಹಿಂದು ಮತ್ತು ಸಿಖ್ ಸಮುದಾಯಗಳಿಗೆ ಸೇರಿದ ಅಫ್ಘಾನ್ ನಿರಾಶ್ರಿತರಿಗೆ ಪೌರತ್ವವನ್ನು ಮಂಜೂರು ಮಾಡಲು ಕ್ರಮಗಳನ್ನು ತೆಗೆದುಕೊಂಡಿತ್ತು. ನೂತನ ಕಾಯ್ದೆಯು ಧಾರ್ಮಿಕ ಕಿರುಕುಳದಿಂದಾಗಿ ಪಾಕಿಸ್ತಾನ,ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶಗಳನ್ನು ತೊರೆದು ಬಂದಿರುವ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಭಾರತದ ಪೌರತ್ವವನ್ನು ಒದಗಿಸುತ್ತದೆ.

ಹಿಂದು ಮತ್ತು ಸಿಖ್ ಸಮುದಾಯಗಳ ‘ವಿಶೇಷ ಸ್ಥಾನಮಾನ ’ವನ್ನು ಗುರುತಿಸುವ ತನ್ನ ಯೋಜನೆಯ ಅಂಗವಾಗಿ ಅಫಘಾನಿಸ್ತಾನ ಸರಕಾರವು ಭಾರತದಲ್ಲಿ ವಾಸವಾಗಿರುವ 3,500 ಅಫಘಾನ್ ಸಿಖ್ ಮತ್ತು ಹಿಂದು ನಿರಾಶ್ರಿತರಿಗೆ ‘ ರಾಷ್ಟ್ರೀಯ ಗುರುತು ಚೀಟಿ ’ಅಥವಾ ‘ತಝ್ಕೀರಾ’ಗಳನ್ನು ವಿತರಿಸಿದೆ ಎಂದು ಅಫಘಾನಿಸ್ತಾನದ ರಾಯಭಾರಿ ತಾಹಿರ್ ಖಾದಿರಿ ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕಳೆದ ತಿಂಗಳು ಭಾರತಕ್ಕೆ ಆಗಮಿಸಿದ್ದ ಅಫಘಾನಿಸ್ತಾನದ ವಿಶೇಷ ನಿಯೋಗವೊಂದು ನಿರಾಶ್ರಿತರಿಗೆ ಗುರುತು ಚೀಟಿಗಳನ್ನು ವಿತರಿಸಿತ್ತು.

‘ ಅಧ್ಯಕ್ಷ ಅಶ್ರಫ್ ಘನಿ ಅವರ ವಿಶೇಷ ಆದೇಶದ ಮೇರೆಗೆ ಈ ಪ್ರಕ್ರಿಯೆಯನ್ನು ನಡೆಸಲಾಗಿದೆ. ನಮ್ಮ ಹಲವಾರು ಹಿಂದು ಮತ್ತು ಸಿಖ್ ಸೋದರ-ಸೋದರಿಯರು ಹಲವಾರು ವರ್ಷಗಳಿಂದ ಭಾರತದಲ್ಲಿ ವಾಸವಿದ್ದಾರೆ ಮತ್ತು ಕೆಲವರಿಗೆ ಇಲ್ಲಿ ಮಕ್ಕಳೂ ಹುಟ್ಟಿದ್ದಾರೆ. ಅವರಿಗೆ ಪಾಸ್ ಪೋರ್ಟ್ ಮತ್ತು ಇತರ ಉದ್ದೇಶಗಳಿಗಾಗಿ ಈ ಗುರುತು ಚೀಟಿಗಳು ಅಗತ್ಯವಾಗಿವೆ ’ಎಂದು ಖಾದಿರಿ ತಿಳಿಸಿದರು.

ಅಫ್ಘಾನಿಸ್ತಾನದಲ್ಲಿ ಜನಿಸಿರುವ ಮತ್ತು ಭಾರತೀಯ ಪಾಸ್‌ ಪೋರ್ಟ್‌ಗಳನ್ನು ಹೊಂದಿರುವ ಅಫ್ಘಾನ್ ಪ್ರಜೆಗಳಿಗೆ ಟ್ರಾವೆಲ್ ಕಾರ್ಡ್‌ಗಳನ್ನೂ ವಿತರಿಸಲಾಗುವುದು. ಈ ಕಾರ್ಡ್‌ನ್ನು ಬಳಸಿ ವೀಸಾದ ಅಗತ್ಯವಿಲ್ಲದೆ ಅವರು ಭಾರತದಿಂದ ಅಫ್ಘಾನಿಸ್ತಾನಕ್ಕೆ ಎಷ್ಟು ಬಾರಿ ಬೇಕಾದರೂ ಭೇಟಿ ನಿಡಬಹುದು. ಭಾರತದಲ್ಲಿ ವಾಸವಿದ್ದು ಅಫಘಾನಿಸ್ತಾನದಲ್ಲ್ಲಿ ಆಸ್ತಿಗಳನ್ನು ಹೊಂದಿರುವ ನಿರಾಶ್ರಿತರಿಗೆ ಅವುಗಳನ್ನು ಮಾರಾಟ ಮಾಡಲು ಸಾಧ್ಯವಿರಲಿಲ್ಲ. ಇದೀಗ ಅದಕ್ಕೆ ಅನುಕೂಲ ಕಲ್ಪಿಸಲು ಅಫ್ಘಾನಿಸ್ಥಾನ ಸರಕಾರವು ನಿರ್ಧರಿಸಿದೆ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News