×
Ad

ಎನ್‌ಆರ್‌ಸಿ-ಸಿಎಬಿ ವಿರುದ್ಧ ಡಿವೈಎಫ್‌ಐ-ಎಸ್‌ಎಫ್‌ಐ ಪ್ರತಿಭಟನೆ

Update: 2019-12-16 20:18 IST

ಮಂಗಳೂರು, ಡಿ.16: ಮತ ಧರ್ಮದ ಮೇಲೆ ದೇಶವನ್ನು ವಿಭಜಿಸುವ ಎನ್‌ಅರ್‌ಸಿ ಮತ್ತು ಸಿಎಬಿ ವಿರುದ್ಧ ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಸೋಮವಾರ ದ.ಕ.ಜಿಲ್ಲಾಧಿಕಾರಿಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಆರೆಸ್ಸೆಸ್ ಅಣತಿಯಂತೆ ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಶಾ ಜೋಡಿಯು ಮತೀಯ ವಿಭಜನೆಯ ಅಪಾಯಕಾರಿ ಆಟವಾಡುತ್ತಿದ್ದಾರೆ. ಈಗಾಗಲೆ ಈ ಕರಾಳ ಕಾನೂನಿನ ವಿರುದ್ಧ ದೇಶಾದ್ಯಂತ ಪ್ರತಿಭಟನೆಯ ಅಲೆ ಎದ್ದಿದೆ. ರವಿವಾರ ಒಂದೇ ದಿನ ರಾತ್ರಿ ಹಗಲೆನ್ನದೆ ದೇಶದ 500ಕ್ಕೂ ಅಧಿಕ ಕಡೆ ಜಾತ್ಯತೀತ ಶಕ್ತಿಗಳು ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ. ಇದರಿಂದ ಮೋದಿ, ಶಾ ವಿಚಲಿತರಾಗಿದ್ದಾರೆ. ಅಷ್ಟೇ ಅಲ್ಲ, ಪ್ರತಿಭಟನೆಯ ಬಿಸಿಯನ್ನು ತಣಿಸಲು ಮೋದಿ-ಶಾ ಅದಕ್ಕೆ ಮತೀಯ ಬಣ್ಣ ಬಲಿಯತೊಡಗಿದ್ದಾರೆ. ಪ್ರತಿಭಟನೆಕಾರರ ಬಟ್ಟೆಬರೆ ನೋಡಿದರೆ ಇದರ ಹಿಂದೆ ಯಾರಿದ್ದಾರೆ ಎಂದು ಮೋದಿ ಹೇಳಿರುವುದು ಪ್ರಧಾನಿಯ ಸ್ಥಾನಕ್ಕೆ ಶೋಭೆ ತರುವಂತದ್ದಲ್ಲ ಎಂದು ಹೇಳಿದರು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ರಚಿಸಲ್ಪಟ್ಟ ದೇಶದ ಸಂವಿಧಾನವನ್ನು ಉಳಿಸುವ ಜವಾಬ್ದಾರಿ ನಾಡಿನ ಜಾತ್ಯತೀತರ ಮೇಲೆ ಇದೆ. ಪ್ರತಿಭಟನೆಯು ಜಾತಿ, ಭಾಷೆ, ಧರ್ಮವನ್ನು ಮೀರಿ ನಡೆಯುತ್ತಿದೆ. ಇದನ್ನು ಮೋದಿ-ಶಾ ಜೋಡಿ ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಆದರೆ, ಜಾತ್ಯತೀತ ಮನಸ್ಸುಗಳು ಈಗಾಗಲೆ ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಿದೆ. ಯಾವುದೇ ಕಾರಣಕ್ಕೂ ಎನ್‌ಆರ್‌ಸಿ-ಸಿಎಬಿಯನ್ನು ಒಪ್ಪಲು ಸಾಧ್ಯವಿಲ್ಲ. ಸಮಾನ ಮನಸ್ಕರೆಲ್ಲರೂ ಇದನ್ನು ವಿರೋಧಿಸಲಿದ್ದಾರೆ ಎಂದು ಮುನೀರ್ ಕಾಟಿಪಳ್ಳ ನುಡಿದರು.

ಈ ಸಂದರ್ಭ ಉಭಯ ಸಂಘಟನೆಗಳ ಮುಖಂಡರಾದ ಸಂತೋಷ್ ಬಜಾಲ್, ದಯಾನಂದ ಶೆಟ್ಟಿ, ನಿತಿನ್ ಕುತ್ತಾರ್, ಮಾಧುರಿ ಬೋಳಾರ್, ರಝಾಕ್ ಮೊಂಟೆಪದವು, ಬಶೀರ್ ಪಂಜಿಮೊಗರು, ಜೀವನ್‌ರಾಜ್ ಕುತ್ತಾರ್,ಸಾದಿಕ್ ಕಣ್ಣೂರು, ಅಶ್ರಫ್ ಕೆ.ಸಿ.ರೋಡ್, ಇಬ್ರಾಹೀಂ ಮದಕ, ಸಮುದಾಯದ ವಾಸುದೇವ ಉಚ್ಚಿಲ್, ದಲಿತ ಸಂಘಟನೆಯ ಎಂ. ದೇವದಾಸ್ ಮತ್ತಿತರರು ಪಾಲ್ಗೊಂಡಿದ್ದರು.

ಶಾಲೆಯಲ್ಲಿ ‘ಬಾಬರಿ ಮಸೀದಿ ಧ್ವಂಸ’ದ ಅಣಕ ಪ್ರದರ್ಶನ ಖಂಡನೀಯ

ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ರವಿವಾರ ರಾತ್ರಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದ ವೇಳೆ ಬಾಬರಿ ಮಸೀದಿ ಧ್ವಂಸ’ದ ಅಣಕು ಪ್ರದರ್ಶನ ನಡೆಸಿರುವುದು ಖಂಡನೀಯ. ಸಾಂಸ್ಕೃತಿಕ ಕಲೆಯ ಹೆಸರಿನಲ್ಲಿ ಇದು ಎಳೆಯ ಮಕ್ಕಳಲ್ಲಿ ವಿಷಬೀಜ ಬಿತ್ತುವ ಪ್ರಯತ್ನವಾಗಿದೆ. ಇದಕ್ಕೆ ಕೇಂದ್ರಾಡಳಿತ ಪ್ರದೇಶದ ಗವರ್ನರ್ ಕಿರಣ್ ಬೇಡಿ, ಕೇಂದ್ರ ಸಚಿವ ಸದಾನಂದ ಗೌಡ, ರಾಜ್ಯದ ಕೆಲವು ಸಚಿವರು, ಶಾಸಕರು, ಹಿರಿಯ ಪೊಲೀಸ್ ಅಧಿಕಾರಿಗಳು ಸಾಕ್ಷಿಯಾಗಿದ್ದಾರೆ. ಸರಕಾರದ ಅನುದಾನದಿಂದ ನಡೆಸಲ್ಪಡುವ ಈ ಶಾಲೆಯಲ್ಲಿ ಮತೀಯ ವಿಷಬೀಜ ಬಿತ್ತಲು ಅವಕಾಶ ಕೊಟ್ಟಿರುವುದು ಗಂಭೀರ ವಿಚಾರವಾಗಿದೆ. ಈ ಬಗ್ಗೆ ಜಿಲ್ಲಾ ಎಸ್ಪಿ ಲಕ್ಷ್ಮಿಪ್ರಸಾದ್ ಸಾರ್ವಜನಿಕರಿಗೆ ಉತ್ತರ ನೀಡಬೇಕಿದೆ ಎಂದು ಮುನೀರ್ ಕಾಟಿಪಳ್ಳ ನುಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News