ನಟಿ ಪಾಯಲ್ ಗೆ 8 ದಿನ ನ್ಯಾಯಾಂಗ ಬಂಧನ

Update: 2019-12-16 15:29 GMT

ಕೋಟಾ, ಡಿ. 16: ಸಾಮಾಜಿಕ ಮಾಧ್ಯಮದಲ್ಲಿ ನೆಹರೂ-ಗಾಂಧಿ ಕುಟುಂಬದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಬಂಧಿತಳಾಗಿದ್ದ ನಟಿ ಪಾಯಲ್ ರೋಹ್ಟಗಿಗೆ ಜೈಪುರದ ಬೂಂದಿಯಲ್ಲಿರುವ ನ್ಯಾಯಾಲಯ ಸೋಮವಾರ 8 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ನಿರೀಕ್ಷಣಾ ಜಾಮೀನು ನೀಡುವಂತೆ ಪಾಯಲ್ ರೋಹ್ಟಗಿ ಡಿಸೆಂಬರ್ 13ರಂದು ಬೂಂದಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಅವರ ಮನವಿ ತಿರಸ್ಕರಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ನೆಹರೂ-ಗಾಂಧಿ ಕುಟುಂಬದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಪೋಸ್ಟ್ ಮಾಡಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ನೀಡಿದ ದೂರಿನ ಹಿನ್ನೆಲೆಯಲ್ಲಿ ದಾಖಲಿಸಲಾದ ಪ್ರಕರಣದಲ್ಲಿ ಬಂಧಿತರಾಗಿದ್ದ ಪಾಯಲ್ ರೋಹ್ಟಗಿಯನ್ನು ಪೊಲೀಸರು ಅಹ್ಮದಾಬಾದ್‌ನಿಂದ ಇಲ್ಲಿಗೆ ಕರೆ ತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ರಾಜಸ್ಥಾನ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಚರಮೇಶ್ ಶರ್ಮಾ ಅವರು ಪಾಯಲ್ ರೋಹ್ಟಗಿ ವಿರುದ್ಧ ಬೂಂದಿಯ ಸದಾರ್ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 2ರಂದು ದೂರು ದಾಖಲಿಸಿದ್ದರು.

ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಖಾತೆಯಲ್ಲಿ ನೆಹರೂ-ಗಾಂಧಿ ಕುಟುಂಬದ ವಿರುದ್ಧ ಪಾಯಲ್ ರೋಹ್ಟಗಿ ಆಕ್ಷೇಪಾರ್ಹ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಶರ್ಮಾ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News