ಉ.ಪ್ರದೇಶದಿಂದ ಚೆನ್ನೈವರೆಗೆ: ದೌರ್ಜನ್ಯದ ವಿರುದ್ಧ ಒಗ್ಗಟ್ಟಾದ ವಿದ್ಯಾರ್ಥಿಗಳು
ಹೊಸದಿಲ್ಲಿ,ಡಿ.16: ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ (ಜೆಎಂಐ)ದಲ್ಲಿ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಹಿಂಸಾಚಾರದ ವರದಿಗಳು ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿವಿಯಿಂದ ಹಿಡಿದು ಐಐಟಿ ಮದ್ರಾಸ್‌ವರೆಗೆ ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ಪ್ರತಿಭಟನೆಯ ಕಿಡಿ ಹೊತ್ತಿಸಿವೆ.
ರವಿವಾರ ಸಂಜೆ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ಜೆಎಂಐ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಬೆಂಕಿ ಹಚ್ಚುವಿಕೆ ಮತ್ತು ಹಿಂಸಾಚಾರದ ಘಟನೆಗಳು ನಡೆದಿದ್ದವು. ಹಿಂಸಾಚಾರದಲ್ಲಿ ತಾವು ಭಾಗಿಯಾಗಿರಲಿಲ್ಲ ಎಂದು ಹೇಳಿರುವ ವಿದ್ಯಾರ್ಥಿಗಳು ಅದನ್ನು ಖಂಡಿಸಿದ್ದಾರೆ. ವಿವಿ ಆವರಣಕ್ಕೆ ನುಗ್ಗಿದ್ದ ದಿಲ್ಲಿ ಪೊಲೀಸರು ಗುಂಪನ್ನು ನಿಯಂತ್ರಿಸಲು ಅಶ್ರುವಾಯು ಪ್ರಯೋಗ,ಲಾಠಿ ಪ್ರಹಾರ ನಡೆಸಿದ್ದು,ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಪೊಲೀಸ್ ಕ್ರೌರ್ಯದ ವರದಿಗಳು ಹೊರಬೀಳುತ್ತಿದ್ದಂತೆ ದೇಶಾದ್ಯಂತ ಪ್ರತಿಭಟನೆಗಿಳಿದಿರುವ ವಿದ್ಯಾರ್ಥಿಗಳು ಪೊಲೀಸ್ ಕ್ರಮವನ್ನು ಖಂಡಿಸಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದ ಅಲಿಗಢ ವಿವಿಯ ವಿದ್ಯಾರ್ಥಿಗಳ ಮೇಲೂ ಅಲ್ಲಿಯ ಪೊಲೀಸರು ಹಿಂಸೆಯನ್ನು ಮೆರೆದಿದ್ದಾರೆ. ಪೊಲೀಸರು ಆ್ಯಂಬುಲೆನ್ಸ್‌ನಲ್ಲಿದ್ದ ಗಾಯಾಳುಗಳನ್ನೂ ಥಳಿಸಿದ್ದಾರೆ ಮತ್ತು ಅವರನ್ನು ಹೋಗಲು ಬಿಟ್ಟಿರಲಿಲ್ಲ. ಪೊಲೀಸರ ಹಿಂಸಾಚಾರದಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಆ್ಯಂಬುಲಎನ್ಸ್ ಚಾಲಕನೋರ್ವನನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಐಐಟಿ ಕಾನ್ಪುರದ ವಿದ್ಯಾರ್ಥಿಗಳು ಜೆಎಂಐ ವಿದ್ಯಾರ್ಥಿಗಳೊಂದಿಗೆ ಏಕತೆಯನ್ನು ವ್ಯಕ್ತಪಡಿಸಲು ಮಂಗಳವಾರ ಮಧ್ಯಾಹ್ನ ಪ್ರತಿಭಟನೆಯೊಂದನ್ನು ಹಮ್ಮಿಕೊಂಡಿದ್ದಾರೆ.
ಜೆಎಂಐನಲ್ಲಿ ಹಿಂಸಾಚಾರವನ್ನು ವಿರೋಧಿಸಿ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್‌ನ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಭಾರತದ ಸ್ವಾತಂತ್ರ್ಯಯ ಚಳವಳಿಯಲ್ಲಿ ಮೆಚ್ಚಿನ ಗೀತೆಯಾಗಿದ್ದ ಬಿಸ್ಮಿಲ್ ಅಝೀಮಾಬಾದಿ ವಿರಚಿತ ‘ಸರ್ಫರೋಷಿ ಕಿ ತಮನ್ನಾ’ದೇಶಭಕ್ತಿ ಗೀತೆಯನ್ನು ಪ್ರತಿಭಟನಾಕಾರರು ಹಾಡಿದರು.
ಜೆಎಂಐ ವಿದ್ಯಾರ್ಥಿಗಳ ವಿರುದ್ಧ ’ಸರಕಾರದ ಕ್ರೂರ ಭಯೋತ್ಪಾದನೆ’ಯನ್ನು ಪ್ರತಿಭಟಿಸಿ ಪ.ಬಂಗಾಳದ ಜಾಧವಪುರ ವಿವಿಯ ವಿದ್ಯಾರ್ಥಿಗಳು ರವಿವಾರ ಮಧ್ಯರಾತ್ರಿ ಜಾಥಾವೊಂದನ್ನು ನಡೆಸಿದರು. ಬನಾರಸ್ ಹಿಂದು ವಿವಿಯಲ್ಲಿಯೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
2016ರಲ್ಲಿ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಯೊಂದಿಗೆ ದೇಶಾದ್ಯಂತ ಸುದ್ದಿಯಾಗಿದ್ದ ಹೈದರಾಬಾದ್ ವಿವಿಯಲ್ಲಿ ಮಿಂಚಿನ ಪ್ರತಿಭಟನೆ ನಡೆದಿದೆ. ವಿದ್ಯಾರ್ಥಿ ಸಂಘವು ಪೊಲಿಸ್ ಹಿಂಸಾಚಾರ,ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧ ತನ್ನ ಪ್ರತಿಭಟನಾ ಕಾರ್ಯಕ್ರಮವನ್ನು ಶೀಘ್ರವೇ ಪ್ರಕಟಿಸಲಿದೆ ಎಂದು ಬಲ್ಲ ಮೂಲಗಳು ತಿಳಿಸಿದವು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ನೀತಿಗಳ ಕಟು ಟೀಕಾಕಾರರಾಗಿರುವ ತಮಿಳು ನಟ ಸಿದ್ಧಾರ್ಥ್ ಅವರು ಸಿಎಎ ಮತ್ತು ಜೆಎಂಐ ಹಿಂಸಾಚಾರದ ಕುರಿತು ಟ್ವೀಟಿಸಿದ್ದಾರೆ. ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ಸಿದ್ದಾರ್ಥ್,‘ಇವರು ಕೃಷ್ಣಾರ್ಜುನರಲ್ಲ. ಇವರು ಶಕುನಿ ಮತ್ತು ದುರ್ಯೋಧನರಾಗಿದ್ದಾರೆ. ವಿವಿಗಳು,ವಿದ್ಯಾರ್ಥಿಗಳ ಮೇಲಿನ ದಾಳಿಗಳನ್ನು ನಿಲ್ಲಿಸಿ’ ಎಂದು ಜಾಮಿಯಾ ಮಿಲ್ಲಿಯಾ ಹ್ಯಾಷ್‌ಟ್ಯಾಗ್‌ನೊಂದಿಗೆ ಸೋಮವಾರ ಟ್ವೀಟಿಸಿದ್ದಾರೆ.
ಅವರ ಟ್ವೀಟ್‌ಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು,ಹಲವರು ಈ ಹಿಂದೆ ಮೋದಿ-ಶಾ ಜೋಡಿಯನ್ನು ಕೃಷ್ಣಾರ್ಜುನರಿಗೆ ಹೋಲಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಟ್ಯಾಗ್ ಮಾಡಿದ್ದಾರೆ.