×
Ad

ಜಾಮಿಯಾ ವಿದ್ಯಾರ್ಥಿಗಳಿಗೆ ಹಾಲಿವುಡ್ ನಟ ಕ್ಯೂಸ್ಯಾಕ್ ಬೆಂಬಲ

Update: 2019-12-16 21:18 IST
ಫೋಟೊ ಕೃಪೆ: The Quint

ಹೊಸದಿಲ್ಲಿ,ಡಿ.16: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯ ವಿದ್ಯಾರ್ಥಿಗಳಿಗೆ ಹಲವಾರು ಬಾಲಿವುಡ್ ಗಣ್ಯರ ಬೆಂಬಲದ ಜೊತೆಯಲ್ಲಿಯೇ ಹಾಲಿವುಡ್ ನಟ ಜಾನ್ ಕ್ಯೂಸ್ಯಾಕ್ ಅವರು ವಿದ್ಯಾರ್ಥಿಗಳೊಂದಿಗೆ ಏಕತೆಯನ್ನು ವ್ಯಕ್ತಪಡಿಸಿ ಟ್ವೀಟಿಸಿದ್ದಾರೆ.

ವಿದ್ಯಾರ್ಥಿಗಳ ವಿರುದ್ಧ ದಿಲ್ಲಿ ಪೊಲೀಸರ ಹಿಂಸಾಚಾರದ ವೀಡಿಯೊಗಳನ್ನು ಪೋಸ್ಟ್ ಮಾಡಿರುವ ಕ್ಯೂಸ್ಯಾಕ್ ‘ಏಕತೆ’ ಎಂದು ಬರೆದಿದ್ದಾರೆ. ಸಿಎಎ ವಿರುದ್ಧ ಕ್ಯಾಲಿಫೋರ್ನಿಯಾ ಪ್ರಜೆಗಳು ಪ್ರತಿಭಟಿಸುತ್ತಿರುವ ಚಿತ್ರಗಳನ್ನೂ ಅವರು ಪೋಸ್ಟ್ ಮಾಡಿದ್ದಾರೆ.

ಬಾಲಿವುಡ್ ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಟ್ವೀಟ್‌ನಲ್ಲಿ ಸರಕಾರವನ್ನು ‘ಫ್ಯಾಶಿಸ್ಟ್’ ಎಂದು ಬಣ್ಣಿಸಿದ್ದಾರೆ. ಇನ್ನು ಮೌನವಾಗಿರಲು ತನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬಾಲಿವುಡ್‌ನ್ನು ಪರೋಕ್ಷವಾಗಿ ಪ್ರಸ್ತಾಪಿಸಿ‘ ನಿಜಕ್ಕೂ ಬದಲಾವಣೆಗಳನ್ನು ತರಬಹುದಾದ ಧ್ವನಿಗಳು ಮೌನವಾಗಿರುವುದು ತನ್ನನ್ನು ಸಿಟ್ಟಿಗೆಬ್ಬಿಸಿದೆ ’ ಎಂದು ಅವರು ಟ್ವೀಟಿಸಿದ್ದಾರೆ.

ಜಾಮಿಯಾ ಮಿಲ್ಲಿಯಾ ಮತ್ತು ಅಲಿಗಢ ಮುಸ್ಲಿಮ್ ವಿವಿ (ಅಮು) ವಿದ್ಯಾಥಿಗಳ ಮೇಲೆ ಪೋಲಿಸರ ಕ್ರೌರ್ಯವನ್ನು ಟೀಕಿಸಿ ನಟ ರಾಜಕುಮಾರ್ ರಾವ್ ಅವರೂ ಟ್ವೀಟಿಸಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೆಲ್ಫಿಯನ್ನು ತೆಗೆದುಕೊಂಡಿದ್ದ ರಾವ್ ಸೇರಿದಂತೆ ಹಿಂದಿ ಚಿತ್ರ ನಟರನ್ನು ಟ್ಯಾಗ್ ಮಾಡಿದ್ದ ನಟಿ ಸಯಾನಿ ಗುಪ್ತಾ ಅವರು ‘ ಜಾಮಿಯಾ ಮತ್ತು ಅಮು ವಿದ್ಯಾರ್ಥಿಗಳ ಪರವಾಗಿ ನಿಮ್ಮಲ್ಲಿ ಕನಿಷ್ಠ ಒಬ್ಬರಾದರೂ ವಿದ್ಯಾರ್ಥಿಗಳ ವಿರುದ್ಧ ಪೊಲಿಸರ ಕ್ರೌರ್ಯವನ್ನು ಖಂಡಿಸಿ ಮೋದಿಯವರಿಗೆ ಟ್ವೀಟಿಸಿ ಅಥವಾ ಸಂದೇಶವನ್ನು ರವಾನಿಸಿ ’ಎಂದು ಟ್ವೀಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News