ಕಲ್ಲಡ್ಕದ ಶ್ರೀರಾಮ ಶಾಲೆಯಲ್ಲಿ ವಿದ್ಯಾರ್ಥಿಗಳ ದುರ್ಬಳಕೆ ಆರೋಪ: ಎಸ್‌ಡಿಪಿಐ ಖಂಡನೆ
ಮಂಗಳೂರು, ಡಿ.16: ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಬಾಬರಿ ಮಸೀದಿ ದ್ವಂಸದ ಅಣುಕು ಪ್ರದರ್ಶನ ನಡೆಸಿ ಕೋಮು ಧ್ವೇಷವನ್ನು ಉತ್ತೇಜಿಸಿದ ಹಾಗೂ ವಿದ್ಯಾರ್ಥಿಗಳ ಮನಸ್ಸಿನಲ್ಲಿ ದ್ವೇಷ- ಹಿಂಸೆಯ ಮನೋಭಾವನೆಯನ್ನು ಹುಟ್ಟುಹಾಕಿದ ಯತ್ನವನ್ನು ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿ ಖಂಡಿಸಿದೆ.
ಕಾರ್ಯಕ್ರಮದಲ್ಲಿ ಪುದುಚೇರಿ ಲೆ.ಗವರ್ನರ್ ಕಿರಣ್‌ಬೇಡಿ ಕೂಡಾ ಉಪಸ್ಥಿತರಿದ್ದು, ಇಂತಹ ಸಮಾಜದ್ರೋಹಿ ಕಾರ್ಯಕ್ರಮಗಳಿಗೆ ಶ್ಲಾಘನೆ ವ್ಯಕ್ತಪಡಿಸಿರುವುದನ್ನು ಎಸ್‌ಡಿಪಿಐ ತೀವ್ರವಾಗಿ ವಿರೋಧಿಸುತ್ತದೆ. ಪೊಲೀಸ್ ಅಧಿಕಾರಿಗಳಾದ ಡಿಜಿಪಿ ಮೋಹನ್ ಪ್ರಸಾದ್, ಭ್ರಷ್ಟಾಚಾರ ನಿಗ್ರಹ ದಳದ ಐಜಿ ಚಂದ್ರಶೇಖರ್, ಜಿಲ್ಲಾ ಎಸ್ಪಿ ಲಕ್ಷೀ ಪ್ರಸಾದ್ ಮತ್ತಿತರರು ಕೂಡಾ ಪಾಲ್ಗೊಂಡಿರುವುದು ಬೇಲಿಯೇ ಹೊಲ ಮೇಯ್ದಂತಾಗಿರುವುದಕ್ಕೆ ಸಮವಾಗಿದೆ ಎಂದು ಎಸ್‌ಡಿಪಿಐ ತಿಳಿಸಿದೆ.
ಬಾಬರಿ ಮಸೀದಿ ಬಗ್ಗೆ ಅನ್ಯಾಯದ ತೀರ್ಪು ಹೊರಬಿದ್ದ ಸಂದರ್ಭದಲ್ಲಿ ಪ್ರತಿಭನೆ ನಡೆಸಲು ಹಾಗೂ ಡಿ. 6 ರಂದು ಬಾಬರಿ ಮಸೀದಿ ಸ್ಮರಣೆಯ ಕಾರ್ಯಕ್ರಮ ನಡೆಸಲು ಜಿಲ್ಲಾ ಪೊಲೀಸ್ ಇಲಾಖೆ ತೀರ್ವ ನಿರ್ಬಂಧ ವಿಧಿಸಿತ್ತು. ಈ ಸಂದರ್ಭ ಕಲ್ಲಡ್ಕದಲ್ಲಿ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದನ್ನು ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತಾದರೂ ಆ ಕಾರ್ಯಕ್ರಮದ ವಿರುದ್ಧ ಇಲಾಖೆ ಯಾವುದೇ ನಿರ್ಬಂಧ ಹೇರಿರಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿ ಎಸ್‌ಡಿಪಿಐ ಸುದ್ದಿಗೋಷ್ಠಿ ನಡೆಸುವುದನ್ನು ಕೂಡಾ ಪೊಲೀಸ್ ಅಧಿಕಾರಿಗಳು ತಡೆದಿದ್ದರು. ಈ ಎಲ್ಲಾ ಬೆಳವಣಿಗೆಗಳು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹೇಗೆ ಕೋಮುತಾರತಮ್ಯ ಮಾಡುತ್ತಿದ್ದಾರೆ ಎನ್ನುವುದಕ್ಕೆ ಪ್ರತ್ಯಕ್ಷ ನಿದರ್ಶನಗಳಾಗಿದೆ. ಜಿಲ್ಲೆಯ ಶಾಂತಿಯನ್ನು ಕದಡುವ ಹಾಗೂ ವಿದ್ಯಾರ್ಥಿಗಳ ಮತ್ತು ಯುವ ಜನತೆಯ ಮನಸ್ಸುನಲ್ಲಿ ಕೋಮುದ್ವೇಷ ಹಾಗು ಹಿಂಸಾ ಮನೋಭಾವನೆಯನ್ನು ಬಿತ್ತುವ ಕಲ್ಲಡ್ಕ ಸಂಘದ ಸಂಘಟಣೆಗಳು ಪೊಲೀಸ್ ಇಲಾಖೆಯ ರಕ್ಷಣೆಯಡಿ ಕಾರ್ಯಾಚರಿಸುವುದು ಅತ್ಯಂತ ಆತಂಕಕಾರಿಯಾಗಿದೆ ಎಂದಿರುವ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಕಾರ್ಯಕ್ರಮದ ಸಂಘಟಕರಾದ ಶಾಲಾ ಆಡಳಿತ ಮಂಡಳಿಯ ವಿರುದ್ಧ ಕಾನೂನು ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.