×
Ad

ಹೆರಿಗೆ ವೇಳೆ ರಕ್ತಸ್ರಾವದಿಂದ ಬಾಣಂತಿ ಸಾವು : ಕುಂದಾಪುರ ಸರಕಾರಿ ಆಸ್ಪತ್ರೆಯ ವಿರುದ್ಧ ಸ್ಥಳೀಯರ ಆಕ್ರೋಶ

Update: 2019-12-16 21:40 IST

ಕುಂದಾಪುರ, ಡಿ.16: ಹೆರಿಗೆ ಸಂದರ್ಭ ಬಾಣಂತಿ ಹಂಗಳೂರು ಅಂಕದಕಟ್ಟೆ ನಿವಾಸಿ ಸುಧೀರ್ ದೇವಾಡಿಗ ಎಂಬವರ ಪತ್ನಿ ಸುಜಾತಾ(26) ಎಂಬವರ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಸೋಮವಾರ ಹಂಗಳೂರು ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆ ಮತ್ತು ಜನಪ್ರತಿನಿಧಿಗಳು ಸೇರಿದಂತೆ ನೂರಾರು ಮಂದಿ ಕುಂದಾಪುರ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಡಿ.15ರಂದು ಸರಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞೆ, ಸುಜಾತ ಅವರಿಗೆ ಸಹಜ ಹೆರಿಗೆ ಮಾಡಿಸಿದ್ದು, ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಈ ವೇಳೆ ತೀವ್ರ ರಕ್ತಸ್ರಾವದಿಂದ ಗಂಭೀರ ಸ್ಥಿತಿಯಲ್ಲಿದ್ದ ಸುಜಾತರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿ ಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಅವರು ಫಲಕಾರಿ ಯಾಗದೆ ಮೃತಪಟ್ಟಿದ್ದರು. ಇದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಸ್ಥಳೀಯರು ಆಸ್ಪತ್ರೆ ಮುಂದೆ ನೆರೆದು, ವೈದ್ಯರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬಳಿಕ ಆಯ್ದ ಕೆಲವರನ್ನು ಆಸ್ಪತ್ರೆಯ ಒಳಗೆ ಕರೆಸಿ ಆಡಳಿತ ಶಸ್ತ್ರಚಿಕಿತ್ಸಕರು ಹಾಗೂ ವೈದ್ಯರ ಜೊತೆಗೆ ಮಾತುಕತೆ ನಡೆಸಲಾ ಯಿತು. ಕರ್ತವ್ಯ ನಿರ್ವಹಿಸಿದ ವೈದ್ಯರು, ಸುಜಾತ ಸಿಸೇರಿಯನ್ ಮಾಡುವಂತೆ ತಿಳಿಸಿದರೂ ಮಾಡದೆ ನಿರ್ಲಕ್ಷ ವಹಿಸಿದರು. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದೆ, ಮನೆಯವರಿಗೂ ಮಾಹಿತಿ ನೀಡದೆ ಸುಜಾತಳ ಸಾವಿಗೆ ಕಾರಣರಾದರು ಎಂದು ಕುಟುಂಬಸ್ಥರು ಆರೋಪ ಮಾಡಿದರು.

ಈ ಕುರಿತು ಸ್ಪಷ್ಟನೆ ನೀಡಿದ ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕ ಡಾ.ರಾಬರ್ಟ್ ರೆಬೆಲ್ಲೋ, ಈ ವಿಚಾರದಲ್ಲಿ ವೈದ್ಯರು ನಿರ್ಲಕ್ಷ ಮಾಡಿಲ್ಲ. ಸ್ಕಾನಿಂಗ್‌ನಿಂದ ಮಗುವಿನ ಬೆಳವಣಿಗೆ, ಸ್ಥಿತಿಯನ್ನು ತಿಳಿಯಬಹುದೇ ಹೊರತು ಸಹಜ ಅಥವಾ ಸಿಸೇರಿಯನ್ ಮಾಡಬೇಕೆ ಎಂಬುದು ಹೇಳಲು ಆಗಲ್ಲ. 10 ಸಾವಿರದಲ್ಲಿ ಒಬ್ಬರಿಗೆ ಉಂಟಾಗುವ ಅಪರೂಪದ ಸಮಸ್ಯೆ ಸುಜಾತಾ ಅವರಲ್ಲಿ ಕಂಡು ಬಂದಿದೆ. ಹೆರಿಗೆಯಾದ ಬಳಿಕ ರಕ್ತಸ್ರಾವ ಉಂಟಾಗಿದ್ದು, ಅದಕ್ಕಾಗಿ ತಕ್ಷಣವೇ ಮಣಿಪಾಲಕ್ಕೆ ಕಳುಹಿಸಿಕೊಡಲಾಗಿತ್ತು ಎಂದರು.

ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಬಿಜೆಪಿ ನಿಯೋಜಿತ ಅಧ್ಯಕ್ಷ ಶಂಕರ ಅಂಕದಕಟ್ಟೆ, ತಾಪಂ ಸದಸ್ಯರಾದ ರಾಜು ದೇವಾಡಿಗ, ಗೌರಿ ದೇವಾಡಿಗ, ಜಗದೀಶ್ ದೇವಾಡಿಗ, ಮಹಿಳಾ ಮಂಡಲಗಳ ಒಕ್ಕೂಟ ಅಧ್ಯಕ್ಷೆ ರಾಧಾದಾಸ್ ಮೊದಲಾದವರು ಹಾಜರಿದ್ದರು. ಈ ವೇಳೆ ಆಸ್ಪತ್ರೆಯ ಆವರಣ ದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ದೊರೆಯದ ಆಯುಷ್ಮಾನ್ ಯೋಜನೆ

ಬಡಕುಟುಂಬದಿಂದ ಬಂದ ಸುಜಾತ, ಕೇವಲ 10 ತಿಂಗಳ ಹಿಂದೆಯಷ್ಟೆ ವಿವಾಹವಾಗಿದ್ದರು. ಇವರ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಯಲ್ಲಿ 1.2 ಲಕ್ಷ ರೂ. ಬಿಲ್ ಆಗಿದ್ದು, ಇದನ್ನು ಪಾವತಿಸಲು ಸಾಧ್ಯವಾಗದ ಕುಟುಂಬ ಗ್ರಾಮಸ್ಥರ ನೆರವನ್ನು ಯಾಚಿಸಿದೆ. ಅದರಂತೆ ಗ್ರಾಮಸ್ಥರಿಂದ 54 ಸಾವಿರ ರೂ. ಸಂಗ್ರಹಿಸ ಲಾಗಿದೆ. ಆದುದರಿಂದ ಸರಕಾರದಿಂದ ಈ ಕುಟುಂಬಕ್ಕೆ ಪರಿಹಾರ ಒದಗಿಸ ಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ಸಹಜ ಹೆರಿಗೆ ಹಾಗೂ ರೋಗಿ ಮೃತಪಟ್ಟ ಕಾರಣ ಆಯುಷ್ಮಾನ್ ಭಾರತ ಯೋಜನೆ ಅನ್ವಯ ಆಗುವುದಿಲ್ಲ ಎಂಬುದಾಗಿ ಮಣಿಪಾಲ ಆಸ್ಪತ್ರೆಯವರು ತಿಳಿಸಿದ್ದಾರೆ ಎಂದು ಸ್ಥಳೀಯರು ಹೇಳಿದರು. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿ ಕಾರಿಗಳಿಗೆ ತಿಳಿಸಿ ಪ್ರಕರಣದ ತನಿಖೆ ನಡೆಸಲಾಗುವುದು. ಆಯುಷ್ಮಾನ್‌ನಲ್ಲಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ಕೊಡಿಸುವ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು ಎಂದು ವೈದ್ಯರು ಈ ಸಂದರ್ಭ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News